×
Ad

ಪ್ಲಾಸ್ಟಿಕ್ ಬ್ಯಾನ್: ಸಿಪಿಎಂಟಿಎ ಅರ್ಜಿಯ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್

Update: 2017-11-08 21:47 IST

ಬೆಂಗಳೂರು, ನ.8: ಪ್ಲಾಸ್ಟಿಕ್ ತಯಾರಿಕೆ, ಪೂರೈಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹಾಕಲಾಗಿರುವ ಅರ್ಜಿಯ ವಿಚಾರಣೆಗೆ ಸರ್ವೋಚ್ಛ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ಜಸ್ಟಿಸ್ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾರನ್ನೊಳಗೊಂಡ ಪೀಠವು ಕೆನರಾ ಪ್ಲಾಸ್ಟಿಕ್ ತಯಾರಕರ ಮತ್ತು ವ್ಯಾಪಾರಿಗಳ ಸಂಘ(ಸಿಪಿಎಂಟಿಎ) ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಒಪ್ಪಿಗೆ ಸೂಚಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎ.ನಝೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಘದ ಅರ್ಜಿಯನ್ನು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಸಂಘ ಹಾಕಿರುವ ಅರ್ಜಿಯ ಜೊತೆ ಸೇರಿಸಲು ಪೀಠ ನಿರ್ಧರಿಸಿದೆ. ಈ ದೂರಿನಂತೆ ಈಗಾಗಲೇ ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಗೆ ಈಗಾಗಲೇ ನೊಟೀಸ್ ಜಾರಿಮಾಡಲಾಗಿದೆ.

ಪ್ಲಾಸ್ಟಿಕ್ ಕೈಚೀಲಗಳ ಬದಲಾಗಿ ಬಳಸಲ್ಪಡುವ ಪರ್ಯಾಯ ವಸ್ತುಗಳಿಂದ ಪರಿಸರದ ಮೇಲಾಗಲಿರುವ ಪರಿಣಾಮಗಳ ಬಗ್ಗೆ ಯಾವುದೇ ಅಧ್ಯಯನ ನಡೆಸದೆ ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಿಕೆ, ಉಪಯೋಗ, ಮಾರಾಟ ಮತ್ತು ಸಂಗ್ರಹಣೆಯ ಮೇಲೆ ನಿಷೇಧ ಹೇರುವುದನ್ನು ರಾಷ್ಟ್ರೀಯ ಹಸಿರು ಪೀಠವೂ ಒಪ್ಪುವುದಿಲ್ಲ ಎಂದು ಸಿಪಿಎಂಟಿಎ ತನ್ನ ಅರ್ಜಿಯಲ್ಲಿ ತಿಳಿಸಿದೆ. 1986ರ ಪರಿಸರ (ಸಂರಕ್ಷಣೆ) ಕಾಯಿದೆಯ 5ನೇ ಭಾಗದಲ್ಲಿ ನೀಡಲಾಗಿರುವ ಸೂಚನೆಯು ರಾಜ್ಯ ಸರಕಾರವು ಪ್ಲಾಸ್ಟಿಕ್ ಕೈಚೀಲಗಳ, ಬ್ಯಾನರ್‌ಗಳ, ಬಂಟಿಂಗ್ಸ್, ಫ್ಲೆಕ್ಸ್, ಧ್ವಜಗಳು, ಕಪ್-ಚಮಚಗಳು ಹಾಗೂ ಶೀಟ್‌ಗಳ ತಯಾರಿಕೆ, ಮಾರಟ, ಪೂರೈಕೆ ಮತ್ತು ಉಪಯೋಗದ ಮೇಲೆ ಸಂಪೂರ್ಣ ನಿಷೇಧ ಹೇರುವ ಅಧಿಕಾರವನ್ನು ನೀಡುವುದಿಲ್ಲ ಎಂದು ಸಂಘ ತಿಳಿಸಿದೆ.

ಕೇಂದ್ರ ಸರಕಾರವು 2011ರ ಪ್ಲಾಸ್ಟಿಕ್ ತ್ಯಾಜ್ಯ (ವ್ಯವಸ್ಥಾಪನೆ ಮತ್ತು ನಿಬಾವಣೆ) ಕಾಯಿದೆಯಡಿ 50 ಮೈಕ್ರೋನ್‌ಗಿಂತ ಕಡಿಮೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಿರುವಾಗ ರಾಜ್ಯ ಸರಕಾರ ತನ್ನ ಅಧಿಕಾರವನ್ನು ಬಳಸಿ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ ಎಂದು ಸಂಘ ತನ್ನ ಅರ್ಜಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News