×
Ad

ಮತ್ತೆ ನಗದು ವ್ಯವಹಾರಕ್ಕೆ ಮರಳಿದ ದೇಶದ ಪ್ರಪ್ರಥಮ ಕ್ಯಾಶ್ ಲೆಸ್ ಗ್ರಾಮ!

Update: 2017-11-08 22:23 IST

ಮುಂಬೈ, ನ.8: ದೇಶದ ಪ್ರಪ್ರಥಮ ನಗದುರಹಿತ ವ್ಯವಹಾರದ ಗ್ರಾಮ ಎಂಬ ಹಿರಿಮೆಗೆ ಪಾತ್ರವಾಗಿದ್ದ ಮುಂಬೈಯ ಧಾಸಯಿ ಇದೀಗ ಮತ್ತೆ ನಗದು ವ್ಯವಹಾರದತ್ತ ಮುಂದಾಗುತ್ತಿದೆ.

ಕೆಲವೊಮ್ಮೆ ಸ್ವೈಪ್ ಮೆಷೀನ್‌ಗಳು ಸರ್ವರ್‌ನೊಂದಿಗೆ ಸಂಪರ್ಕ ಹೊಂದಲು ಬಹಳಷ್ಟು  ಸಮಯ ಹಿಡಿಯುತ್ತದೆ. ಅಲ್ಲದೆ ಎಟಿಎಂಗಳಲ್ಲಿ ಈಗ ನಗದು ಸುಲಭವಾಗಿ ದೊರೆಯತ್ತಿರುವ ಕಾರಣ ಜನರು ನಗದು ವ್ಯವಹಾರಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಡಿಸೆಂಬರ್‌ನಲ್ಲಿ ಧಾಸಯಿ ಗ್ರಾಮ ದೇಶದ ಪ್ರಪ್ರಥಮ ನಗದು ರಹಿತ ವ್ಯವಹಾರದ ಗ್ರಾಮ ಎಂಬ ಮಾನ್ಯತೆಗೆ ಪಾತ್ರವಾಗಿತ್ತು. ಸುಮಾರು 2,700 ಎಕರೆ ವಿಸ್ತೀರ್ಣದ ಈ ಗ್ರಾಮದಲ್ಲಿ 5,000 ದಷ್ಟು ಜನಸಂಖ್ಯೆಯಿದೆ. ಇವರಲ್ಲಿ ಹೆಚ್ಚಿನವರು ವ್ಯಾಪಾರಿಗಳು ಹಾಗೂ ಕೃಷಿಕರು. ಸುತ್ತಮುತ್ತಲಿನ 27 ಹಳ್ಳಿಗಳಿಗೆ ಇದೊಂದು ಕೇಂದ್ರಸ್ಥಾನವಾಗಿದೆ.

ನೋಟು ಅಮಾನ್ಯದ ಸಂದರ್ಭ ದೇಶದ ಇತರೆಡೆಯ ಜನರು ಬ್ಯಾಂಕ್ ಎದುರು ಸರತಿ ಸಾಲಲ್ಲಿ ನಿಂತು ದಣಿಯುತ್ತಿದ್ದರೆ, ಧಾಸಯಿ ಗ್ರಾಮದ ಜನತೆ ಗ್ರಾಮದಲ್ಲಿರುವ ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸ್ವೈಪ್ ಮೆಷೀನ್ ಮೂಲಕ ತಮ್ಮಲ್ಲಿರುವ ಎಟಿಎಂ ಕಾರ್ಡ್ ಬಳಸಿ ವ್ಯವಹರಿಸುತ್ತಿದ್ದರು. ಸ್ಮಾರ್ಟ್‌ಫೋನ್ ಇದ್ದವರು ಮೊಬೈಲ್ ಬ್ಯಾಂಕಿಂಗ್ ಮತ್ತು ‘ಬಿಎಚ್‌ಐಎಂ ಆ್ಯಪ್’ ಬಳಸಿ ವ್ಯವಹಾರ ನಡೆಸತೊಡಗಿದರು. ಹೀಗಾಗಿ ಇಡೀ ಗ್ರಾಮವೇ ನಗದು ವ್ಯವಹಾರ ರಹಿತ ಗ್ರಾಮವಾಗಿ ಪ್ರಸಿದ್ಧವಾಯಿತು.

ಈ ಗ್ರಾಮದಲ್ಲಿ ಎರಡು ಬ್ಯಾಂಕ್‌ಗಳಿವೆ. ಥಾಣೆ ಜಿಲ್ಲಾ ಸಹಕಾರಿ ಬ್ಯಾಂಕ್(ಟಿಡಿಸಿಬಿ) ಮತ್ತು ವಿಜಯಾ ಬ್ಯಾಂಕ್. ಟಿಡಿಸಿಬಿಯಲ್ಲಿ 27,000 ಖಾತೆದಾರರಿದ್ದು ಇವರಲ್ಲಿ ಕೇವಲ 4,000 ಖಾತೆದಾರರಿಗೆ ಎಟಿಎಂ ಸೌಲಭ್ಯವಿದೆ. ವಿಜಯಾ ಬ್ಯಾಂಕಿನಲ್ಲಿ ಜನ್‌ಧನ್ ಖಾತೆ ಸೇರಿದಂತೆ ಸುಮಾರು 10,000 ಖಾತೆದಾರರಿದ್ದು ಇವರಲ್ಲಿ ಎಲ್ಲರಿಗೂ ಎಟಿಎಂ ಕಾರ್ಡ್ ನೀಡಲಾಗಿದೆ. ಅಲ್ಲದೆ ಬ್ಯಾಂಕ್ ಆಫ್ ಬರೋಡ ಈ ಗ್ರಾಮದಲ್ಲಿ ಇ-ಲಾಬಿ ಕೇಂದ್ರವನ್ನು ಆರಂಭಿಸಿದ್ದು ತನ್ನ ಗ್ರಾಹಕರಿಗೆ ಪಿಒಎಸ್ ಯಂತ್ರಗಳನ್ನು ಉಚಿತವಾಗಿ ಬಳಸಲು ಅವಕಾಶ ಮಾಡಿಕೊಟ್ಟಿದೆ.

  ಆದರೆ ಎಟಿಎಂ ಬಳಸುವ ಬಗ್ಗೆ ಗ್ರಾಮಸ್ಥರಲ್ಲಿ ಕೆಲವೊಂದು ತಪ್ಪು ಅಭಿಪ್ರಾಯಗಳಿವೆ ಎನ್ನುತ್ತಾರೆ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ರಂಜೀತ್ ಸಾವರ್ಕರ್. ಎಟಿಎಂ ವ್ಯವಹಾರಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ, ಅಲ್ಲದೆ ಎಟಿಎಂ ವ್ಯವಹಾರ ಸುರಕ್ಷಿತವಲ್ಲ, ಇದರಿಂದ ತಮ್ಮ ಖಾತೆಯ ವಿವರ ಸೋರಿಕೆಯಾಗುತ್ತದೆ ಎಂದು ಗ್ರಾಮಸ್ಥರು ಹೆದರುತ್ತಿದ್ದಾರೆ ಎಂದವರು ಹೇಳುತ್ತಾರೆ. ಅಲ್ಲದೆ ಬಹುತೇಕ ಕುಟುಂಬದಲ್ಲಿ ಒಂದು ಎಟಿಎಂ ಕಾರ್ಡ್ ಇರುತ್ತದೆ. ಕುಟುಂಬದ ಯಜಮಾನ ಎಟಿಎಂನಿಂದ ಹಣ ತೆಗೆದು ,ಮನೆಖರ್ಚು ನಿಭಾಯಿಸುತ್ತಾನೆ.ಅಲ್ಲದೆ ಎಟಿಎಂ ಕಾರ್ಡ್ ಬಳಸಿದವರಿಗೆ ಯಾವುದೇ ಹೆಚ್ಚುವರಿ ಪ್ರೋತ್ಸಾಹದ ಕೊಡುಗೆಯಿಲ್ಲ. ಆದ್ದರಿಂದ ನಗದು ರಹಿತವೇ ಸುಲಭಸಾಧ್ಯ ಎಂದು ಜನರು ಭಾವಿಸಿದ್ದಾರೆ. ಅಲ್ಲದೆ ಬಹುತೇಕ ಜನ್‌ಧನ್ ಖಾತೆದಾರರಿಗೆ ಎಟಿಎಂ ಕಾರ್ಡ್ ಬಳಸುವುದು ಹೇಗೆಂದೇ ತಿಳಿದಿಲ್ಲ.

 ಅಲ್ಲದೆ ಗ್ರಾಮದಲ್ಲಿರುವ 80 ವ್ಯಾಪಾರಿಗಳಲ್ಲಿ 60 ವ್ಯಾಪಾರಿಗಳಿಗೆ ಮಾತ್ರವೇ ಸ್ವೈಪ್ ಮೆಷೀನ್ ಒದಗಿಸಲಾಗಿದೆ. ಉಳಿದ ಅಂಗಡಿಯವರು ಸ್ವೈಪ್ ಮೆಷೀನ್‌ಗೆ ಬೇಡಿಕೆ ಸಲ್ಲಿಸಿ 6 ತಿಂಗಳು ಕಳೆದರೂ ಇನ್ನೂ ಯಂತ್ರಗಳು ಸರಬರಾಜಾಗಿಲ್ಲ. ಅಲ್ಲದೆ ಹಳ್ಳಿಪ್ರದೇಶವಾದ ಕಾರಣ ಇ-ವ್ಯಾಲೆಟ್, ಪೇಟಿಎಂ ಮುಂತಾದ ಹಲವು ಸೌಲಭ್ಯಗಳು ಇಲ್ಲಿ ದೊರೆಯುತ್ತಿಲ್ಲ. ಆದ್ದರಿಂದ ಈ ಗ್ರಾಮವೂ ಇದೀಗ ನಿಧಾನವಾಗಿ ನಗದು ವ್ಯವಹಾರದತ್ತಲೇ ಮರಳುತ್ತಿದೆ.

  ನೋಟು ಅಮಾನ್ಯೀಕರಣ ಕ್ರಮಕ್ಕೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ ಧಾಸಯಿ ಗ್ರಾಮದ ಪ್ರತಿಷ್ಠೆಯನ್ನು ಮರಳಿ ಸ್ಥಾಪಿಸಲು ಸ್ಥಳೀಯಾಡಳಿತ ಮುಂದಾಗಿದ್ದು , ಬ್ಯಾಂಕ್ ಕಾರ್ಡ್‌ಗಳನ್ನು ಸಾಮೂಹಿಕವಾಗಿ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಹಾಗೂ ಟಿಡಿಸಿಬಿ ಆಶ್ರಯದಲ್ಲಿ ಮೂರು ಕಾರ್ಯಕ್ರಮ ನಡೆಯಲಿದ್ದು ಅರ್ಜಿ ಹಾಕಿದವರಿಗೆ ಸ್ಥಳದಲ್ಲೇ ಕಾರ್ಡ್ ವಿತರಿಸಲಾಗುವುದು ಎಂದು ತಹಶೀಲ್ದಾರ್ ಸಚಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News