ಅಕ್ರಮ ಮರಳುಗಾರಿಕೆ: 1.4 ಕೋಟಿ ರೂ. ಮೌಲ್ಯದ ಸೊತ್ತು ವಶ
ಮಂಗಳೂರು, ನ. 8: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರು ಸಮೀಪದಿಂದ ಅಕ್ರಮವಾಗಿ ಮರಳನ್ನು ತೆಗೆದು ಯಂತ್ರೋಪಕರಣ ಸಹಾಯದಿಂದ ವಾಹನಗಳಿಗೆ ಲೋಡ್ ಮಾಡುವ ಬಗ್ಗೆ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿ ಮರಳು ಹಾಗೂ ಯಂತ್ರೋಪಕರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯಂತ್ರೋಪಕರಣಗಳ ಸಹಾಯದಿಂದ ಮರಳನ್ನು ಅಕ್ರಮವಾಗಿ ತೆಗೆದು ಖಾಸಗಿ ಜಮೀನಿನಲ್ಲಿ ಶೇಖರಿಸಿ ವಾಹನಗಳಿಗೆ ಪ್ಲಾಸ್ಟಿಕ್ ಚೀಲದ ಮೂಲಕ ಮರಳನ್ನು ತುಂಬಿಸಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದಿರುವ ಮೇರೆಗೆ ಮೇಲಾಧಿಕಾರಿಗಳ ಆದೇಶದಂತೆ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಕಂಕನಾಡಿ ನಗರ ಠಾಣಾ ಪೊಲೀಸ್ ಆಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
2 ಹಿಟಾಚಿ ಯಂತ್ರಗಳು, 2 ಜೆಸಿಬಿ ಯಂತ್ರಗಳು, ಲಾರಿ ಮತ್ತು ಕ್ಯಾಂಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಮರಳು ಶೇಖರಣೆಗೆ ಅವಕಾಶ ನೀಡಿದ್ದ ಭೂ ಮಾಲಕರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ಲತೀಫ್ ಮತ್ತು ಜಾಗದ ಮಾಲಕ ಡೆಲ್ವಿ ಆಸ್ಟಿನ್ ಫೆರ್ನಾಂಡಿಸ್ ಮತ್ತು ವಾಹನಗಳ ಮಾಲಕರ ವಿರುದ್ದ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯ ವೇಳೆ ವಶಪಡಿಸಿಕೊಂಡ ಯಂತ್ರೋಪಕರಣಗಳು, ಮರಳು ತುಂಬಿದ ವಾಹನಗಳು ಹಾಗೂ ಮರಳಿನ ಒಟ್ಟು ಅಂದಾಜು ಮೌಲ್ಯ 1,40,26,000 ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.