ಕ್ರಾಸಿಂಗ್ ಸ್ಟೇಶನ್ ಆಗಿ ಇನ್ನಂಜೆ ನಿಲ್ದಾಣ ಮೇಲ್ದರ್ಜೆಗೆ
ಉಡುಪಿ, ನ.8: ಕೊಂಕಣ ರೈಲು ಮಾರ್ಗದಲ್ಲಿ ಈಗ ಕೇವಲ ಎರಡು ಪ್ಯಾಸೆಂಜರ್ ರೈಲುಗಳಿಗೆ ನಿಲುಗಡೆ ಹೊಂದಿರುವ ಇಲ್ಲಿಗೆ ಸಮೀಪದ ಇನ್ನಂಜೆಯ ಹಾಲ್ಟ್ ಸ್ಟೇಶನ್‌ನ್ನು, ಸುಸಜ್ಜಿತ ಕ್ರಾಸಿಂಗ್ ಸ್ಟೇಶನ್ ಆಗಿ ಮೇಲ್ದರ್ಜೆಗೇರಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ತಿಳಿಸಿದ್ದಾರೆ.
ಇಂದು ಇನ್ನಂಜೆ ರೈಲ್ವೆ ಸ್ಟೇಶನ್‌ಗೆ ಭೇಟಿ ನೀಡಿದ ಪತ್ರಕರ್ತರ ತಂಡದೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. 1990ರಲ್ಲಿ ಪ್ರಾರಂಭ ಗೊಂಡ ಈ ನಿಲ್ದಾಣದಲ್ಲಿ ಈಗ ಕೇವಲ ಮಂಗಳೂರು-ಮಡಂಗಾವ್ ಪ್ಯಾಸೆಂಜರ್ ರೈಲು (2) ಹಾಗೂ ಮಡಂಗಾವ್-ಮಂಗಳೂರು ಡೇಮು ರೈಲುಗಳಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ. ಈಗ ರೈಲು ಬರುವ ವೇಳೆ ಟಿಕೇಟ್ ನೀಡಲು ಸಣ್ಣ ಸ್ಟೇಶನ್ ಇದೆ. ಬೇರೆ ಯಾವುದೇ ಸೌಕರ್ಯವಿಲ್ಲ ಎಂದವರು ತಿಳಿಸಿದರು.
ಇದೀಗ ಒಟ್ಟು 6.78 ಕೋಟಿ ರೂ.ವೆಚ್ಚದಲ್ಲಿ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದರು. ಇದರಿಂದ ಇಲ್ಲಿ ಈಗಿರುವ ಮುಖ್ಯ ಹಳಿಯೊಂದಿಗೆ ಸುಮಾರು ಒಂದು ಕಿ.ಮೀ. ಉದ್ದದ ಕ್ರಾಸಿಂಗ್ ಟ್ರಾಕ್, 560ಮೀ. ಉದ್ದದ ಪ್ಲಾಟ್‌ಫಾವರ್ ಎತ್ತರದಲ್ಲಿ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಟಿಕೇಟ್ ಬುಕ್ಕಿಂಗ್ ಆಫೀಸ್, ವೈಟಿಂಗ್ ರೂಮ್, ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆ, ವಿವಿಧ ರೂಮುಗಳು, ಸಿಬ್ಬಂದಿಗಳಿಗೆ ಕ್ವಾರ್ಟಸ್ ನಿರ್ಮಾಣಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಎರಡು ಕಡೆ ಇನ್ನಂಜೆ ಹಾಗೂ ಉತ್ತರ ಕನ್ನಡದ ಕುಮಟಾ ಮತ್ತು ಗೋಕರ್ಣದ ನಡುವಿನ ಮಿರ್ಜಾನದಲ್ಲಿ ಕ್ರಾಸಿಂಗ್ ಸ್ಟೇಶನ್‌ಗಳು ನಿರ್ಮಾಣ ಗೊಳ್ಳುತ್ತಿವೆ. ಮಿರ್ಜಾನದಲ್ಲಿ 7.12 ಕೋಟಿ ರೂ.ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. ಅಲ್ಲದೇ ಉತ್ತರ ಕನ್ನಡದ ಮುರ್ಡೇಶ್ವರದಲ್ಲಿ ಲೂಪ್‌ಲೈನ್ ಹಾಗೂ ಪ್ಲಾಟ್‌ಫಾರ್ಮ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು. ಕೊಂಕಣ ರೈಲ್ವೆಯ ಈ ಮೂರು ಕಾಮಗಾರಿಗಳು ಒಟ್ಟು 14.87 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ ಎಂದು ವಿಜಯಕುಮಾರ್ ತಿಳಿಸಿದರು.
ಇನ್ನಂಜೆಯಲ್ಲಿ ಪ್ರಾಥಮಿಕ ಕಾಮಗಾರಿಗಳು 2018ರ ಮಾರ್ಚ್ ಒಳಗೆ ಮುಗಿಯಲಿದ್ದು, ಸ್ಟಾಫ್ ಕ್ವಾರ್ಟರ್ಸ್ ಹಾಗೂ ಫ್ಲಾಟ್‌ಫಾರ್ಮ್‌ಗಳ ಕಾಮಗಾರಿಯನ್ನು 2018ರ ಜೂನ್ ಒಳಗೆ ಹಾಗೂ ಹಳಿ ಅಳವಡಿಕೆ ಹಾಗೂ ಕ್ರಾಸಿಂಗ್ ಕಾಮಗಾರಿಗಳನ್ನು ಅಕ್ಟೋಬರ್ ಒಳಗೆ ಮುಗಿಸಿ 2018ರ ನವೆಂಬರ್‌ನಲ್ಲಿ ಇದನ್ನು ಜನರ ಬಳಕೆಗೆ ಬಿಡುವ ಯೋಜನೆಯನ್ನು ಹಾಕಿಕೊಳ್ಳ ಲಾಗಿದೆ ಎಂದು ಅವರು ವಿವರಿಸಿದರು.
ಇನ್ನಂಜೆಯಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣದ ಅಗತ್ಯತೆಯ ಕುರಿತು ವಿವರಿಸಿದ ಅವರು, ಈಗ ಉಡುಪಿಯಿಂದ ಪಡುಬಿದ್ರಿಗೆ 18ಕಿ.ಮೀ. ಅಂತರವಿದೆ. ಇದು ಸಿಂಗಲ್ ಟ್ರಾಕ್ ಆಗಿರುವುದರಿಂದ ಉಡುಪಿ ಬಿಟ್ಟ ಒಂದು ರೈಲು ಪಡುಬಿದ್ರಿ ಮುಟ್ಟುವತನಕ ಮತ್ತೊದು ರೈಲು ಹಾದು ಹೋಗುವಂತಿಲ್ಲ. ಕೊಂಕಣ ರೈಲು ಮಾರ್ಗದಲ್ಲಿ ಗರಿಷ್ಠ 30 ರೈಲುಗಳು ಸಂಚರಿಸಬಹುದು. ಆದರೆ ಈಗ 50 ರೈಲುಗಳು ಓಡಾಡುತ್ತಿವೆ.
ಸದ್ಯಕ್ಕೆ ಈ ನಿಲ್ದಾಣದಲ್ಲಿ ಎರಡು ಪ್ಯಾಸೆಂಜರ್ ರೈಲಿಗೆ ಮಾತ್ರ ನಿಲುಗಡೆ ಇದ್ದು, ಮುಂದೆ ಇದು ಅಭಿವೃದ್ಧಿ ಹೊಂದಿದ ಬಳಿಕ ಇಲ್ಲಿಂದ ಹೆಚ್ಚಿನ ಪ್ರಯಾಣಿಕರು ಲಭ್ಯವಾದರೆ, ಇಲ್ಲಿ ಮುಂಬಯಿ ಮತ್ತು ಇತರ ದೂರದ ಪ್ರಯಾಣ ರೈಲಿಗೆ ನಿಲುಗಡೆಯನ್ನು ಸಹ ನೀಡಬಹುದಾಗಿದೆ ಎಂದವರು ಹೇಳಿದರು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಇಲ್ಲಿಗೆ ತೀರಾ ಸಮೀಪದಲ್ಲಿದ್ದು, ಕಟಪಾಡಿ, ಸುಭಾಶ್‌ನಗರ, ಪಣಿಯೂರು, ಪಾಂಗಾಳ, ಶಂಕರಪುರ, ಶಿರ್ವ, ಮಂಚಕಲ್ಲು ಆಸುಪಾಸಿನ ಜನರು ಈ ಸ್ಟೇಶನ್‌ನ್ನು ಹೆಚ್ಚೆಚ್ಚು ಬಳಸಿದರೆ, ಅದರಿಂದ ಇಲ್ಲಿ ಹೆಚ್ಚಿನ ರೈಲು ನಿಲ್ಲಲು ಅನುಕೂಲವಾಗುತ್ತದೆ ಎಂದರು. ಪಡುಬದ್ರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಸುವವರ ಸಂಖ್ಯೆ ತೀರಾ ಕಡಿಮೆ ಇದ್ದು, ಇದರಿಂದ ಅಲ್ಲಿ ಯಾವುದೇ ಹೆಚ್ಚುವರಿ ರೈಲಿಗೆ ನಿಲುಗಡೆ ನೀಡಲು ಸಾಧ್ಯವಾಗುವುದಿಲ್ಲ ಎಂದವರು ವಿವರಿಸಿದರು.
ಇನ್ನಂಜೆ ಕ್ರಾಸಿಂಗ್ ಸ್ಟೇಶನ್‌ಗೆ ಪೂರ್ವಭಾವಿ ಕೆಲಸ 2016ರ ಜುಲೈಯಲ್ಲಿ ಆರಂಭಗೊಂಡಿದ್ದರೆ, ಕಾಮಗಾರಿ ಈ ವರ್ಷದ ಎಪ್ರಿಲ್‌ನಿಂದ ಪ್ರಾರಂಭಗೊಂಡು 2018ರ ನವೆಂಬರ್‌ನಲ್ಲಿ ಈ ನಿಲ್ದಾಣ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಎಂದು ಸುಧಾ ಕೃಷ್ಣಮೂರ್ತಿ ಹೇಳಿದರು. ಕಾರವಾರದ ಸೀನಿಯರ್ ಪಿಆರ್‌ಓ ದಿಲೀಪ್ ಭಟ್ ಉಪಸ್ಥಿತರಿದ್ದರು.