ಮಂಗಳೂರು ಕ್ಷೇತ್ರದಿಂದ 20 ಸಾವಿರ ಕಾರ್ಯಕರ್ತರ ನಿರೀಕ್ಷೆ :ಸಂತೋಷ್ ಬೋಳಿಯಾರ್
ಉಳ್ಳಾಲ,ನ.9: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಯು ನ.11 ರಂದು ಮಂಗಳೂರಿಗೆ ತಲುಪಿ ನಗರದ ಕೇಂದ್ರ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಕಾರ್ಯಕ್ರಮದಲ್ಲಿ ಮಂಗಳೂರು ವಿದಾನಸಭಾ ಕ್ಷೇತ್ರದ ಸುಮಾರು 20,000 ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್ ಹೇಳಿದರು.
ತೊಕ್ಕೊಟ್ಟಿನಲ್ಲಿರುವ ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರದ ಕಛೇರಿಯಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‍ನ ಹಿಟ್ಲರ್ ಸರಕಾರವು ಕಳೆದ ನಾಲ್ಕುವರೆ ವರುಷಗಳಿಂದ ದುರಾಡಳಿತ ನಡೆಸುತ್ತಿದೆ.ಸ್ಥಳೀಯ ಶಾಸಕ,ಸಚಿವ ಖಾದರ್ ಅವರು ಪ್ರತಿನಿಧಿಸುತ್ತಿರುವ ಮಂಗಳೂರು ವಿದಾನಸಭಾ ಕ್ಷೇತ್ರದಲ್ಲಂತೂ ಗಾಂಜಾ ಮಾಫಿಯಾ,ಸಮಾಜ ಘಾತುಕ ಮತ್ತು ಕೊಲೆಗಡುಕ ಶಕ್ತಿಗಳೇ ಮೇಲೈಸುತ್ತಿದ್ದರೂ ಸಹ ಸಚಿವರು ಮಾತ್ರ ಸಮಾಜಬಾಹಿರ ದುಷ್ಕೃತ್ಯಗಳನ್ನೆಸಗುವ ದುಷ್ಟ ಶಕ್ತಿಗಳ ರಕ್ಷಣೆಗೆ ನಿಂತಿರುವುದು ಕ್ಷೇತ್ರದ ಜನಸಾಮಾನ್ಯರು ಪೊಲೀಸ್ ಇಲಾಖೆಯಲ್ಲಿ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರ ಈ ಎಲ್ಲಾ ಜನವಿರೋಧಿ ಧೋರಣೆಯನ್ನು ಮಟ್ಟಹಾಕಲೆಂದೇ ಮಾಜಿ ಮುಖ್ಯಮಂತ್ರಿ ಜನನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನವಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾ.ಡಾ.ಕೆ.ಎ ಮುನೀರ್ ಬಾವಾ, ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಂ, ಕ್ಷೇತ್ರದ ಪ್ರ.ಕಾರ್ಯದರ್ಶಿಗಳಾದ ಮೋಹನ್‍ರಾಜ್ ಕೆ.ಆರ್, ಮನೋಜ್ ಆಚಾರ್ಯ, ಮುಖಂಡರಾದ ಸುಜಿತ್ ಮಾಡೂರು,ಅಶ್ರಫ್ ಹರೇಕಳ,ಪ್ರಕಾಶ್ ಸಿಂಪೋಣಿ, ಜೀವನ್ ಕೆರೆಬೈಲ್ ಉಪಸ್ಥಿತರಿದ್ದರು.