ಸಿಬಿಐ ವಿಶೇಷ ನಿರ್ದೇಶಕ ಅಸ್ತಾನಾ ನೇಮಕಾತಿ ಪ್ರಕರಣ: ನ.13ರಂದು ವಿಚಾರಣೆ ನಿಗದಿಗೊಳಿಸಿದ ಸುಪ್ರೀಂ
ಹೊಸದಿಲ್ಲಿ, ನ.9: ಗುಜರಾತ್ ಪದವೃಂದದ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾರನ್ನು ಸಿಬಿಐಯ ವಿಶೇಷ ನಿರ್ದೇಶಕರನ್ನಾಗಿ ನೇಮಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂಕೋರ್ಟ್, ನ.13ರಂದು ವಿಚಾರಣೆ ನಿಗದಿಪಡಿಸಿದೆ.
ಅರ್ಜಿಯು ಓರ್ವ ಮಹಾನುಭಾವರನ್ನು ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ನೇಮಿಸಿದ ಪ್ರಕರಣದ ಕುರಿತಾಗಿದೆ. ಈ ನಿರ್ಧಾರವು ಏಕಪಕ್ಷೀಯ ಹಾಗೂ ಅಕ್ರಮವಾಗಿದ್ದು ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಆದ್ದರಿಂದ ಈ ಅರ್ಜಿಯ ವಿಚಾರಣೆ ತ್ವರಿತವಾಗಿ ನಡೆಯಬೇಕು ಎಂದು ಎನ್‌ಜಿಒ ಸಂಸ್ಥೆಯೊಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣವೊಂದರಲ್ಲಿ ಅಸ್ತಾನಾರ ಹೆಸರೂ ಸೇರಿದೆ . ಆದ್ದರಿಂದ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು. ಸಿಬಿಐ ನಿರ್ದೇಶಕರ ನಂತರದ ಸ್ಥಾನವಾಗಿರುವ ವಿಶೇಷ ನಿರ್ದೇಶಕರು ಸಿಬಿಐ ನಿರ್ವಹಿಸುತ್ತಿರುವ ಎಲ್ಲಾ ತನಿಖೆ ಪ್ರಕರಣಗಳ ಮೇಲ್ವಿಚಾರಣೆ ನಡೆಸುತ್ತಾರೆ. ಆದ್ದರಿಂದ ಅಸ್ತಾನಾ ಹೆಸರು ಕೇಳಿಬರುತ್ತಿರುವ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಸಿಬಿಐಯಿಂದ ವರ್ಗಾಯಿಸಬೇಕು ಎಂದು ಎನ್‌ಜಿಒ ಪರ ವಕೀಲ ಪ್ರಶಾಂತ್ ಭೂಷಣ್ ಒತ್ತಾಯಿಸಿದರು.
ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್ ಮತ್ತು ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ನ.13ಕ್ಕೆ ನಿಗದಿಗೊಳಿಸಿದೆ.