ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ : ಆರೋಪಿಗಳ ಬಂಧನ
ಅಜೆಕಾರು, ನ.9: ಕುಡಿದು ಗಲಾಟೆ ಮಾಡುತ್ತಿದ್ದ ಧ್ವೇಷದಿಂದ ಸಂಬಂಧಿಯನ್ನೇ ಕೊಲೆಗೈದ ಘಟನೆ ಹೆರ್ಮುಂಡೆ ಗ್ರಾಮದ ಬೊಳ್ಳ ಹೊಳೆ ಸೇತುವೆಯ ಬಳಿ ನ.8ರಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ತನಿಖೆ ನಡೆಸಿದ ಕಾರ್ಕಳ ಪೊಲೀಸರು ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆರ್ಮುಂಡೆ ಗ್ರಾಮದ ಕುಡ್ಜೆ ದರ್ಖಾಸ್ ನಿವಾಸಿ ರಾಜು ಯಾನೆ ರಾಜೇಶ್ (48) ಎಂಬವರು ಕೊಲೆಯಾಗಿದ್ದು, ಮೃತರ ಅಕ್ಕನ ಮಗ ಹೆರ್ಮುಂಡೆ ಗ್ರಾಮದ ಕುರ್ಜೆಬೈಲುವಿನ ಅಶೋಕ್(21) ಮತ್ತು ದೊಡ್ಡಮ್ಮನ ಮಗ ಸತೀಶ್(29) ಬಂಧಿತ ಆರೋಪಿಗಳಾಗಿದ್ದಾರೆ.
ಮಧ್ಯಾಹ್ನ 2.30ರ ಸುಮಾರಿಗೆ ಹೊಳೆಯ ಸೇತುವೆ ಬಳಿ ರಾಜು ಅವರ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಾಯಗಳಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಸಂಬಂಧಿ ರಾಮ ಎಂಬವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಅವರ ಮಾರ್ಗದರ್ಶನದಂತೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೋನಾ ವಣೆ ನಿರ್ದೇಶನದಂತೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಮತ್ತು ಅಜೆಕಾರು ಠಾಣಾ ಪೊಲೀಸ್ ಉಪನಿರೀಕ್ಷಕ ಮಧು ಬಿ. ನೇತೃತ್ವದ ತಂಡ ತನಿಖೆ ನಡೆಸಿ ಹೆರ್ಮುಂಡೆ ಗ್ರಾಮದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ರಾಜು ಕಳೆದ ಕೆಲವು ಸಮಯಗಳಿಂದ ಕುಡಿದು ಅಶೋಕ್ ಮತ್ತು ಸತೀಶ್ ಹಾಗೂ ಅವರ ಕುಟುಂಬದವರೊಂದಿಗೆ ಜಗಳ ಮಾಡುತ್ತಿದ್ದು, ಇದೇ ದ್ವೇಷದಿಂದ ಇವರಿಬ್ಬರು ಹೆರ್ಮುಂಡೆ ಸೇತುವೆ ಬಳಿ ಕುಡಿದು ಮಲಗಿದ್ದ ರಾಜುವಿನ ಎರಡೂ ಕಾಲುಗಳನ್ನು ಚಪ್ಪಡಿ ಕಲ್ಲಿನಿಂದ ಜಜ್ಜಿ, ಬಳಿಕ ಬೈರಾಸ್‌ನಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಮೃತ ರಾಜು ಹಾಗೂ ಬಂಧಿತ ಸತೀಶ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಶೋಕ್ ಮೆಸ್ಕಾಂನ ಖಾಸಗಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.