×
Ad

ರಾಷ್ಟ್ರ ರಾಜಧಾನಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ

Update: 2017-11-09 20:02 IST

ಹೊಸದಿಲ್ಲಿ, ನ. 9: ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ (ಎನ್‌ಸಿ ಆರ್)ದಲ್ಲಿ ವಾಯು ಗುಣಮಟ್ಟದ ಸ್ಥಿತಿ ಇದುವರೆಗೆ ಸುಧಾರಿಸಿಲ್ಲ. ಇದರಿಂದ ದಟ್ಟ ಹೊಗೆಯೊಂದಿಗೆ ಬದುಕುವ ಇಲ್ಲಿನ ನಿವಾಸಿಗಳ ಹೋರಾಟ ಮುಂದುವರಿದಿದೆ.

ಇದಲ್ಲದೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹಚ್ಚುತ್ತಿದೆ. ವಾತಾವರಣದಲ್ಲಿ ದಟ್ಟ ಹೊಗೆ ತುಂಬಿಕೊಂಡಿರುವುದರಿಂದ ಪರಿಸರ ಗೋಚರವಾಗುತ್ತಿಲ್ಲ.

ವಾಯು ಗುಣಮಟ್ಟ ಕುಸಿತದ ಹಿನ್ನೆಲೆಯಲ್ಲಿ ನೋಯ್ಡಾ, ಗಾಝಿಯಾಬಾದ್ ಹಾಗೂ ದಿಲ್ಲಿಗಳಲ್ಲಿ ಸೆಕೆಂಡರಿ ಶಾಲೆಗಳಿಗೆ ಶನಿವಾರದ ವರೆಗೆ ರಜೆ ಘೋಷಿಸಿದೆ. ಹೊಗೆಯಿಂದಾಗಿ ರೈಲು ಹಾಗೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. 41 ರೈಲುಗಳ ಆಗಮನ ವಿಳಂಬವಾಗಿದೆ ಹಾಗೂ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಸಮ-ಬೆಸ ಸಾರಿಗೆ ಯೋಜನೆ ಮರು ಆರಂಭಿಸಲು ಸರಕಾರ ನಿರ್ಧರಿಸಿದೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಹೇಳಿದ್ದಾರೆ.

  ದಿಲ್ಲಿಯ ನಿವಾಸಿಗಳಿಗೆ ಮುಖ್ಯವಾಗಿ ಅಸ್ತಮಾ ಹಾಗೂ ಹೃದಯದ ತೊಂದರೆಯಿಂದ ಬಳಲುತ್ತಿರುವ ವೃದ್ಧರು ಹಾಗೂ ಮಕ್ಕಳಿಗೆ ಸರಕಾರ ಆರೋಗ್ಯ ಸಲಹೆ ನೀಡಿದೆ. ನೆರೆಯ ರಾಜ್ಯಗಳಾದ ಉತ್ತರಪ್ರದೇಶ ಹರ್ಯಾಣ, ಪಂಜಾಬ್ ಹಾಗೂ ರಾಜಸ್ಥಾನದಲ್ಲಿ ಬೆಳೆ ತ್ಯಾಜ್ಯ ಉರಿಸುತ್ತಿರುವುದರಿಂದ ದಿಲ್ಲಿಯಲ್ಲಿ ಹೊಗೆ ಆವರಿಸುತ್ತಿದೆ ಎಂದು ಹೇಳಲಾಗುತ್ತಿದೆ.

ನ. 14ರ ವರೆಗೆ ನಿರ್ಮಾಣ ಚಟುವಟಿಕೆಗೆ ನಿಷೇಧ

 ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿ ನವೆಂಬರ್ 14ರ ವರೆಗೆ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.

ವಾಯು ಮಾಲಿನ್ಯ ನಿಯಂತ್ರಿಸದಿರುವುದಕ್ಕೆ ದಿಲ್ಲಿ ಸರಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ಸ್ವತಂತರ್ ಕುಮಾರ್ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.

ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿ ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ, ಖಾಸಗಿ ಅಥವಾ ಸರಕಾರ ಯಾವುದೇ ರೀತಿಯ ಕಾಮಗಾರಿ ನಡೆಸಬಾರದು ಎಂದು ಅದು ಹೇಳಿದೆ.

  ಹೊಗೆ, ಸಿಮೆಂಟ್‌ನಂತಹ ನಿರ್ಮಾಣ ಕಾಮಗಾರಿಯ ಸಾಮಗ್ರಿಗಳನ್ನು ಟ್ರಕ್‌ಗಳಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನ ದಿಲ್ಲಿ ಪ್ರವೇಶಿಸುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ.

ನ. 13-17: ಸಮ-ಬೆಸ ವಾಹನ ಸಂಚಾರ

 ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿ ನವೆಂಬರ್ 13ರಿಂದ 17ರ ವರೆಗೆ ಸಮ-ಬೆಸ ವಾಹನ ಸಂಚಾರ ಜಾರಿಗೊಳಿಸಲಾಗುವುದು ಎಂದು ದಿಲ್ಲಿ ಸರಕಾರ ಶುಕ್ರವಾರ ಹೇಳಿದೆ.

 ಮುಂದಿನ 48 ಗಂಟೆಗಳ ಕಾಲ ವಾಯು ಮಾಲಿನ್ಯದ ಗಂಭೀರ ಸ್ಥಿತಿ ಮುಂದುವರಿದರೆ ಸಮ-ಬೆಸ ವಾಹನ ಸಂಚಾರ ಅನುಷ್ಠಾನಗೊಳಿಸಲು ದಿಲ್ಲಿ ಸರಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಕೈಲಾಸ್ ಗೆಹ್ಲೋಟ್ ತಿಳಿಸಿದ್ದಾರೆ.

ವಾಯು ಮಾಲಿನ್ಯ ಈ ವಾರ ಅಪಾಯಕಾರಿ ಮಟ್ಟಕ್ಕೆ ತಲುಪಲು ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದಲ್ಲಿ ಬೆಳೆ ತ್ಯಾಜ್ಯ ಉರಿಸಿರುವುದೇ ಕಾರಣ ಎಂದು ಗುರುವಾರ ತಜ್ಞರು ಹೇಳಿದ್ದಾರೆ.

ನಾಸಾ ಸೆರೆ ಹಿಡಿದ ಛಾಯಾಚಿತ್ರ ಪಂಜಾಬ್ ಕೇಂದ್ರೀಕೃತವಾಗಿ ಇತರ ರಾಜ್ಯಗಳಲ್ಲಿ ಅಕ್ಟೋಬರ್ 27, 29 ಹಾಗೂ 31ರಂದು ಬೆಳೆ ತ್ಯಾಜ್ಯವನ್ನು ದಹಿಸಿರುವುದು ಬಹಿರಂಗಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News