ಕೋರ್ಟ್ ಮೆಟ್ಟಿಲೇರಲಿದೆ ಪ.ಬಂಗಾಳ-ಒಡಿಶಾ ನಡುವಿನ 'ರಸಗುಲ್ಲಾ' ಹೋರಾಟ

Update: 2017-11-09 14:40 GMT

ಕೋಲ್ಕತಾ,ನ.9: ಪ್ರಸಿದ್ಧ ಸಿಹಿಖಾದ್ಯ ರಸಗುಲ್ಲಾದ ಮೂಲದ ಕುರಿತು ಪ.ಬಂಗಾಳ ಮತ್ತು ಒಡಿಶಾಗಳ ನಡುವಿನ ಕಹಿ ಹೋರಾಟ ಈಗ ನ್ಯಾಯಾಲಯದ ಮೆಟ್ಟಿಲುಗಳನ್ನೇರುವ ಸಾಧ್ಯತೆಯಿದೆ.

ರಸಗುಲ್ಲಾವನ್ನು ಅಭಿವೃದ್ಧಿಗೊಳಿಸಿದ ಹೆಗ್ಗಳಿಕೆಯು ಒಡಿಶಾದ ಪಾಲಾಗಲು ತನ್ನ ಸರಕಾರವು ಬಿಡುವುದಿಲ್ಲ ಎಂದು ಹೇಳಿದ ಪ.ಬಂಗಾಳದ ಆಹಾರ ಸಂಸ್ಕರಣೆ ಸಚಿವ ಅಬ್ದುರ್ ರಝಾಕ್ ಮೂಲಾ ಅವರು, ಬಂಗಾಳವು ರಸಗುಲ್ಲಾದ ಮೂಲವಾಗಿದೆ. ನಾವು ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ. ನ್ಯಾಯಾಲಯವೇ ನಿರ್ಧರಿಸಲಿ. ಅದು ತಾರ್ಕಿಕ ಅಂತ್ಯ ಕಾಣುವವರೆಗೂ ನಾವು ಬಿಡುವುದಿಲ್ಲ ಎಂದು ಹೇಳಿದರು.

ರಸಗುಲ್ಲಾದ ಮೂಲವನ್ನು ಪತ್ತೆ ಹಚ್ಚಲು ರಚಿಸಲಾಗಿದ್ದ ಒಂದಕ್ಕಿಂತ ಹೆಚ್ಚು ಸಮಿತಿಗಳು ಈ ಸಿಹಿಖಾದ್ಯ ಕಳೆದ ಸುಮಾರು 600 ವರ್ಷಗಳಿಂದಲೂ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ಬೆಟ್ಟು ಮಾಡಿವೆ ಎಂದು ಒಡಿಶಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರದೀಪಕುಮಾರ ಪಾಣಿಗ್ರಾಹಿ ಅವರು 2015ರಲ್ಲಿ ಹೇಳಿದಾಗಿನಿಂದಲೂ ಉಭಯ ರಾಜ್ಯಗಳ ನಡುವೆ ಕಾಳಗ ತೀವ್ರಗೊಂಡಿದೆ.

ರಸಗುಲ್ಲಾದ ಮೂಲ ಕುರಿತು ಈ ಕಾಳಗವು ಕೇವಲ ಬಂಗಾಳಿ ಮತ್ತು ಒಡಿಯಾ ಭಾವನೆಗಳ ರಕ್ಷಣೆಗಾಗಿ ಅಲ್ಲ. ಈ ಹಕ್ಕು ಈ ಎರಡೂ ರಾಜ್ಯಗಳ ಸಿಹಿತಿಂಡಿ ತಯಾರಿಕರಿಗೆ ಹೆಚ್ಚಿನ ವಹಿವಾಟು ತರುವ ಸಾಧ್ಯತೆಯಿದೆ.

ರಸಗುಲ್ಲಾ ಮೂಲದ ಕುರಿತು ಅರ್ಜಿಯ ಜೊತೆಗೆ ಅದಕ್ಕೆ ಭೌಗೋಳಿಕ ಸಂಕೇತ(ಜಿಐ) ನೀಡುವಂತೆಯೂ ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಪ.ಬಂಗಾಳ ಸರಕಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

1868ರಲ್ಲಿ ಖ್ಯಾತ ಸಿಹಿತಿಂಡಿ ತಯಾರಕ ನವೀನ ಚಂದ್ರ ದಾಸ ಅವರು ಮೊದಲ ಬಾರಿಗೆ ರಸಗುಲ್ಲಾವನ್ನು ಆವಿಷ್ಕರಿಸಿದ್ದರು ಎಂದು ಪ್ರತಿಪಾದಿಸಿರುವ ಪ.ಬಂಗಾಳ ಸರಕಾರವು ಅದನ್ನು ಸಮರ್ಥಿಸಲು 19ನೇ ಶತಮಾನದ ಇತಿಹಾಸವನ್ನು ಉಲ್ಲೇಖಿಸಿದೆ.

ಇನ್ನೊಂದೆಡೆ ಒಡಿಶಾ ಸರಕಾರವು, ಆರು ಶತಮಾನಗಳ ಹಿಂದೆಯೇ ರಾಜ್ಯದ ಮಠಗಳು ಮತ್ತು ದೇವಸ್ಥಾನಗಳಲ್ಲಿ ರಸಗುಲ್ಲಾವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿತ್ತು. ಪುರಿಯಲ್ಲಿ ಮೊದಲು ಅದನ್ನು ಆವಿಷ್ಕರಿಸಲಾಗಿದ್ದು, ‘ಖೀರ್ ಮೋಹನಾ‘ ಅದರ ಮೊದಲ ಅವತಾರವಾಗಿತ್ತು. ಬಳಿಕ ಅದು ರಸಗುಲ್ಲಾ ಎಂದಾಗಿತ್ತು ಎಂದು ಹೇಳಿದೆ. ತನ್ನ ವಾದಕ್ಕೆ ಪೂರಕವಾಗಿ ಅದು ಐತಿಹಾಸಿಕ ಸಂಶೋಧನೆಗಳನ್ನು ಉಲ್ಲೇಖಿಸಿದೆ.

ಈ ಸಿಹಿಖಾದ್ಯದ ಮೂಲದ ಸಂಭ್ರಮಾಚರಣೆಗಾಗಿ ಒಡಿಶಾ ಸರಕಾರವು 2015,ಜು.30ರಂದು ರಸಗುಲ್ಲಾ ದಿವಸ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಚಾಲನೆ ನೀಡಿತ್ತು. ಒಡಿಶಾದ ಸಿಹಿತಿಂಡಿ ತಯಾರಕರು ಭುವನೇಶ್ವರದಲ್ಲಿ ಪ್ರದರ್ಶನ ಮತ್ತು ಜಾಗ್ರತಿ ಕಾರ್ಯಕ್ರಮವೊಂದನ್ನೂ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News