​ಮಣಿಪಾಲ: ‘ಪ್ರಕೃತಿ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

Update: 2017-11-09 14:43 GMT

ಉಡುಪಿ, ನ.9: ಪ್ರತಿಭಾವಂತ ಪ್ರೌಢ ಶಾಲಾ ವಿದ್ಯಾರ್ಥಿಯೊಬ್ಬನ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಆವೆಮಣ್ಣಿನಲ್ಲಿ ಆತ ರಚಿಸಿದ ಕಲಾಕೃತಿಗಳ ಪ್ರದರ್ಶನ ‘ಪ್ರಕೃತಿ’ ಇದೇ ನ.12ರಿಂದ 14ರವರೆಗೆ ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ.

ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ 12ರ ಹರೆಯದ ಪ್ರಭಾವ್ ಶೆಟ್ಟಿ ಅವರ ಪ್ರತಿಭೆಯನ್ನು ಪ್ರದರ್ಶಿಸುವ ವರ್ಣಚಿತ್ರಕಲಾ ಪ್ರದರ್ಶನ ಹಾಗೂ ಆವೆಮಣ್ಣಿನ ಕಲಾಕೃತಿಗಳ ಪ್ರದರ್ಶನ ಮೂರು ದಿನಗಳ ಬೆಳಗ್ಗೆ 10:30ರಿಂದ ಸಂಜೆ 7:30ರವರೆಗೆ ನಡೆಯಲಿದೆ ಎಂದು ತ್ರಿವರ್ಣ ಆರ್ಟ್ ಸೆಂಟರ್‌ನ ಹರೀಶ್ ಸಾಗಾ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಭಾವ್ ಶೆಟ್ಟಿ ಕಲಾವಿದ, ಗುರು ಹರೀಶ್ ಸಾಗಾ ಅವರ ಮಾರ್ಗದರ್ಶನ ದಲ್ಲಿ ಜಲವರ್ಣ ಮಾಧ್ಯಮದಲ್ಲಿ ರಚಿಸಿದ 25 ಕಲಾಕೃತಿಗಳು ಹಾಗೂ ಆವೆಮಣ್ಣಿನಲ್ಲಿ ರಚಿಸಿದ 45 ಕಲಾಕೃತಿಗಳು ಇಲ್ಲಿ ಪ್ರದರ್ಶಿಸಲ್ಪಡಲಿವೆ. ಇವರು ಈಗಾಗಲೇ ಹಲವು ಚಿತ್ರ ಪ್ರದರ್ಶನಗಳನ್ನು ಜಿಲ್ಲೆಯ ನಾನಾ ಕಡೆಗಳಲ್ಲಿ ನಡೆಸಿದ್ದಾರೆ ಹಾಗೂ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಪ್ರಭಾವ್ ಶೆಟ್ಟಿ ಅವರ ತಂದೆ ಕುಂದಾಪುರದ ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದರು.

ಈ ಪ್ರದರ್ಶನವನ್ನು ನ.12ರ ರವಿವಾರ ಬೆಳಗ್ಗೆ 10ಕ್ಕೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಉದ್ಘಾಟಿಸಲಿದ್ದು, ಎಂಐಟಿಯ ಸಹ ನಿರ್ದೇಶಕ ಬಾಲಕೃಷ್ಣ ಮದ್ದೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಕ್ಲಬ್ ಅಂಬಲಪಾಡಿಯ ಕಾರ್ಯದರ್ಶಿ ಎ.ಸತೀಶ್ ಶೆಟ್ಟಿ ಹಾಗೂ ನ್ಯಾಯವಾದಿ ಆನಂದ ಮಡಿವಾಳ ಮುಖ್ಯ ಅತಿಥಿಗಳಾಗಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News