ಉಡುಪಿ:ನ.11ರಂದು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

Update: 2017-11-09 14:48 GMT

ಮಣಿಪಾಲ, ನ.9: ರಾಷ್ಟ್ರೀಯ ಉತ್ಕೃಷ್ಟತಾ ಪುರಸ್ಕಾರ ಪಡೆದಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇದರ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ನಂದಿನಿ ಚಿತ್ರಕಲಾ ಸ್ಪರ್ಧೆ’ಯನ್ನು ನ.11ರಂದು ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
 ಹಾಲು ಹಾಗೂ ಹಾಲಿನ ಉತ್ಪನ್ನಗಳ ಕುರಿತಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಏರ್ಪಡಿ ಸಲಾಗಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯ 5ರಿಂದ 7ನೇ ತರಗತಿಯವರೆಗಿನ ಮಕ್ಕಳು ‘ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ’ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ‘ಹೈನುಗಾರಿಕೆಯಿಂದ ಸ್ವ-ಉದ್ಯೋಗ’ ವಿಷಯದ ಮೇಲೆ ಚಿತ್ರವನ್ನು ರಚಿಸಬಹುದಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಇಂದಿಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಚಿತ್ರಕಲಾ ಸ್ಪರ್ಧೆ ನ.11ರಂದು ಬೆಳಗ್ಗೆ 10:30ರಿಂದ 12:15ರವರೆಗೆ ನಡೆಯಲಿದೆ. ಪ್ರತಿ ಶಾಲೆಯಲ್ಲಿ ಪ್ರತಿ ವಿಭಾಗದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳು ಭಾಗವಹಿಸುವಂತೆ ಸ್ಪರ್ಧೆಯ ದಿನವೇ ಬೆಳಗ್ಗೆ ಸ್ಥಳದಲ್ಲಿ ಹೆಸರು ನೊಂದಾವಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೆಗ್ಡೆ ವಿವರಿಸಿದರು.

ಸ್ಪರ್ಧೆಯನ್ನು ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಬಹುಮಾನ ವಿತರಣಾ ಸಮಾರಂಭ ಅಪರಾಹ್ನ 2:30ರಿಂದ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ, ಪ್ರಭಾರ ಡಿಡಿಪಿಐ ನಾಗೇಶ್ ಶ್ಯಾನ್‌ಭಾಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

 ಚಿತ್ರ ಬಿಡಿಸಲು ಬೇಕಾದ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಚಿತ್ರ ಬಿಡಿಸಲು 90 ನಿಮಿಷಗಳ ಅವಧಿ ನೀಡಲಾಗುತ್ತದೆ. ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಕ್ರಮವಾಗಿ 10,000ರೂ., 6,000ರೂ. ಹಾಗೂ 3,000ರೂ.ರೂ. ಬಹುಮಾನ ನೀಡಲಾಗುವುದು. ಅಲ್ಲದೇ ತಲಾ 1,000ರೂ.ಗಳ 15 ಸಮಾಧಾನಕರ ಬಹುಮಾನವನ್ನು ನೀಡಲಾಗುವುದು ಎಂದು ಹೆಗ್ಡೆ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸದಸ್ಯ ಉದಯ ಎಸ್. ಕೋಟ್ಯಾನ್, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಶಿವಶಂಕರ ಸ್ವಾಮಿ, ಹೇಮಶೇಖರ್, ಡಾ.ನಿತ್ಯಾನಂದ ಭಕ್ತ ಹಾಗೂ ಜಿ.ಎ.ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News