ಬಿಜೆಪಿ ಯಾತ್ರೆಗೆ ಅನುಮತಿ ನಿರಾಕರಣೆ ಪ್ರಜಾಪ್ರಭುತ್ವ ವಿರೋಧಿ ನೀತಿ: ಮಾಳವಿಕಾ
ಉಡುಪಿ, ನ.9: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸರಿಯಾದ ಕಾರಣ ನೀಡದೇ ಅನುಮತಿ ನಿರಾಕರಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಸರಕಾರ ಈ ರೀತಿ ನಡೆದುಕೊಂಡ ಪರಿಣಾಮ ಮಡಿಕೇರಿಯ ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಯಾತ್ರೆ ನಡೆದಿಲ್ಲ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರೆ ಮಾಳವಿಕ ಅವಿನಾಶ್ ಗುರುವಾರ ತಿಳಿಸಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವೈಫಲ್ಯ, ಭ್ರಷ್ಟಾಚಾರ, ಸುಳ್ಳು ಭರವಸೆ, ನರೇಂದ್ರ ಮೋದಿ ಸರಕಾರದ ಸಾಧನೆಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸುವ ನಿಟ್ಟಿ ನಲ್ಲಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲೂ ಈ ಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.
ನಾಳೆ ನಡೆಯುವ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ, ಕೊಡಗು, ಮಂಡ್ಯದಲ್ಲಿ ಲಕ್ಷಾಂತರ ಮಂದಿಯನ್ನು ಹತ್ಯೆಗೈದ ವ್ಯಕ್ತಿಯ ಜಯಂತಿ ಆಚರಣೆಯನ್ನು ಸರಕಾರದ ಖರ್ಚಿನಲ್ಲಿ ನಡೆಸುವ ಅಗತ್ಯ ಇದೆಯೇ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡ ರಾದ ಸುಲೋಚನಾ ಭಟ್, ನಯನ ಗಣೇಶ್, ಕಟಪಾಡಿ ಶಂಕರ ಪೂಜಾರಿ, ಕುಯಿಲಾಡಿ ಸುರೇಶ್ ನಾಯಕ್, ಯಶ್ಪಾಲ್ ಸುವರ್ಣ, ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.
‘ರಘುಪತಿ ಭಟ್‌ರ ಹೆಸರು ಕೆಡಿಸುವ ಹುನ್ನಾರ’
ಮಾಜಿ ಶಾಸಕ ರಘುಪತಿ ಭಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುಳ್ಳು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿರುವುದು ಅವರ ಹೆಸರನ್ನು ಕೆಡಿಸುವ ಹುನ್ನಾರವಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ತಿಳಿಸಿದರು.
ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆಂಬ ಸುದ್ದಿಗೆ ವಿರುದ್ಧವಾಗಿ ಈ ಸುದ್ದಿಯನ್ನು ಹರಿಯಬಿಡಲಾಗಿದೆ. ಪ್ರಮೋದ್ ಬಿಜೆಪಿ ಸೇರುವ ಸುದ್ದಿ ಗಾಳಿಸುದ್ದಿ ಅಲ್ಲ. ಆದರೆ ರಘುಪತಿ ಭಟ್ ಕಾಂಗ್ರೆಸ್ ಸೇರುವ ಸುದ್ದಿ ಮಾತ್ರ ಗಾಳಿಸುದ್ದಿ. ಪ್ರಮೋದ್ ಬಿಜೆಪಿ ಸೇರ್ಪಡೆಗೊಂಡರೂ ಭಟ್ ಮಾತ್ರ ಬಿಜೆಪಿಯಲ್ಲೇ ಇರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.