ಉ. ಕೊರಿಯ ಪರಮಾಣು ಬಿಕ್ಕಟ್ಟು ನಿವಾರಿಸಲು ‘ಕಠಿಣ ಪರಿಶ್ರಮ’: ಚೀನಾ ಅಧ್ಯಕ್ಷರಿಗೆ ಟ್ರಂಪ್ ಒತ್ತಾಯ
ಬೀಜಿಂಗ್, ನ. 9: ಉತ್ತರ ಕೊರಿಯ ಪರಮಾಣು ಬಿಕ್ಕಟ್ಟು ನಿವಾರಿಸುವಲ್ಲಿ ‘ಕಠಿಣ ಪರಿಶ್ರಮ’ ಪಡುವಂತೆ ಹಾಗೂ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಒತ್ತಾಯಿಸಿದ್ದಾರೆ.
ಗುರುವಾರ ಬೀಜಿಂಗ್‌ನಲ್ಲಿ ಉಭಯ ನಾಯಕರ ನಡುವೆ ನಡೆದ ಮಾತುಕತೆಯ ವೇಳೆ ಈ ಬೇಡಿಕೆಯನ್ನು ಮುಂದಿಟ್ಟ ಟ್ರಂಪ್, ಸಮಯ ಮೀರುತ್ತಿದ್ದು ಕ್ಷಿಪ್ರವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ತನ್ನ ಚೀನಾ ಭೇಟಿಯ ಎರಡನೆ ದಿನದಂದು ನಡೆದ ಮಾತುಕತೆಯ ವೇಳೆ, ಅಮೆರಿಕದೊಂದಿಗಿನ ಚೀನಾದ ‘ಏಕಪಕ್ಷೀಯ ಹಾಗೂ ಅನುಚಿತ’ ಮಿಗತೆ (ಸರ್‌ಪ್ಲಸ್) ವ್ಯಾಪಾರದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದರು. ಆದರೆ, ‘‘ಅದಕ್ಕಾಗಿ ನಾನು ಚೀನಾವನ್ನು ದೂರುವುದಿಲ್ಲ’’ ಎಂದರು.
ಇದೇ ಸಂದರ್ಭದಲ್ಲಿ ಉಭಯ ದೇಶಗಳು 250 ಬಿಲಿಯ ಡಾಲರ್ (ಸುಮಾರು 16.24 ಲಕ್ಷ ಕೋಟಿ ರೂಪಾಯಿ) ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದವು.
ಬೀಜಿಂಗ್‌ನ ತಿಯಾನನ್ಮೆನ್ ಚೌಕದ ಪಕ್ಕದಲ್ಲೇ ಇರುವ ‘ಗ್ರೇಟ್ ಹಾಲ್ ಆಫ್ ದ ಪೀಪಲ್’ನಲ್ಲಿ ಉಭಯ ನಾಯಕರ ಮಾತುಕತೆ ನಡೆಯಿತು.
‘‘ನಾವು ವೇಗವಾಗಿ ಕಾರ್ಯಪ್ರವೃತ್ತರಾಗಬೇಕು. ಈ ವಿಷಯದಲ್ಲಿ (ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮ) ಇತರ ಯಾರಿಗಿಂತಲೂ ಹೆಚ್ಚಿನ ವೇಗದಲ್ಲಿ ಮತ್ತು ಪರಿಣಾಮಕಾರಿಯಾಗಿ ಚೀನಾ ಕಾರ್ಯಪ್ರವೃತ್ತವಾಗಬೇಕಾಗಿದೆ’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
ದಕ್ಷಿಣ ಏಶ್ಯದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಒಮ್ಮತ
ದಕ್ಷಿಣ ಏಶ್ಯದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಹಾಗೂ ಈ ವಲಯದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಬರಲು ಅಮೆರಿಕ ಮತ್ತು ಚೀನಾ ಒಮ್ಮತಕ್ಕೆ ಬಂದಿವೆ ಎಂದು ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಯಲ್ಲಿ ದಕ್ಷಿಣ ಏಶ್ಯ, ಅದರಲ್ಲೂ ಮುಖ್ಯವಾಗಿ ಯುದ್ಧಗ್ರಸ್ತ ಅಫ್ಘಾನಿಸ್ತಾನದ ಪರಿಸ್ಥಿತಿ ಪ್ರಸ್ತಾಪಗೊಂಡಿತು.