ಚೀನಾದಲ್ಲಿ ಟ್ವಿಟರ್ ನಿಷೇಧವಿದ್ದರೂ ಟ್ವೀಟ್ ಮಾಡಿದ ಟ್ರಂಪ್!

Update: 2017-11-09 16:11 GMT

ಬೀಜಿಂಗ್, ನ. 9: ಚೀನಾದಲ್ಲಿ ಟ್ವಿಟರ್, ಫೇಸ್‌ಬುಕ್ ಮುಂತಾದ ಪಾಶ್ಚಾತ್ಯ ದೇಶಗಳ ಸಾಮಾಜಿಕ ಮಾಧ್ಯಮಗಳು ನಿಷಿದ್ಧ. ಆ ದೇಶದ ಇಂಟರ್‌ನೆಟ್‌ನಲ್ಲಿ ಈ ತಾಣಗಳು ಲಭ್ಯವಿಲ್ಲ. ಇವುಗಳಿಗೆ ಪರ್ಯಾಯ ಮಾಧ್ಯಮಗಳನ್ನು ಚೀನಾ ಸ್ವತಃ ತಾನೇ ನಿರ್ಮಿಸಿಕೊಂಡಿದೆ.

ಆದರೆ, ಟ್ವಿಟರ್ ಪ್ರಿಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಡ ರಾತ್ರಿ ತನ್ನ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡುವಲ್ಲಿ ಯಶಸ್ವಿಯಾದರು! ಈ ಟ್ವೀಟ್‌ನಲ್ಲಿ ಟ್ರಂಪ್ ತನಗೆ ‘ಫಾರ್ಬಿಡನ್ ಸಿಟಿ’ಗೆ ಪ್ರವಾಸ ಕಲ್ಪಿಸಿರುವುದಕ್ಕಾಗಿ ಹಾಗೂ ಅಲ್ಲಿನ ವಿಶಾಲ ಹಾಗೂ ಶತಮಾನಗಳ ಹಳೆಯ ಅರಮನೆ ಆವರಣದಲ್ಲಿ ಖಾಸಗಿ ಔತಣಕೂಟವನ್ನು ಏರ್ಪಡಿಸಿರುವುದಕ್ಕಾಗಿ ಆತಿಥೇಯರಿಗೆ ಧನ್ಯವಾದ ಸಲ್ಲಿಸಿದರು.

ಟ್ವಿಟರ್ ಲಭ್ಯವಿಲ್ಲದಿದ್ದರೂ ಟ್ರಂಪ್ ಚೀನಾದಲ್ಲಿ ಹೇಗೆ ಟ್ವೀಟ್ ಮಾಡಿದರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿದೆ.

‘‘ಉಪಗ್ರಹ ನೆಟ್‌ವರ್ಕ್‌ನಲ್ಲಿ ವೈಫೈ ಮೂಲಕ ಅವರು ಟ್ವೀಟ್ ಮಾಡಿರಬಹುದು’’ ಎಂದು ಚೀನಾದ ಸಾಮಾಜಿಕ ಮಾಧ್ಯಮ ‘ವೈಬೊ’ದಲ್ಲಿ ಓರ್ವ ಬಳಕೆದಾರ ಹೇಳಿದ್ದಾರೆ.

ಹೆಚ್ಚಿನ ವಿದೇಶೀಯರು ಚೀನಾದ ಹೊರಗೆ ಲಭ್ಯವಿರುವ ವೆಬ್‌ಸೈಟ್‌ಗಳಿಗೆ ಸಂಪರ್ಕ ಪಡೆಯಲು ‘ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್)ಗಳಿಗೆ ಲಾಗಾನ್ ಆಗುತ್ತಾರೆ. ಇನ್ನೊಂದು ಆಯ್ಕೆಯೆಂದರೆ, ತನ್ನ ದೇಶದಿಂದ ಹೊರಡುವ ಮೊದಲು ಡಾಟಾ ರೋಮಿಂಗ್ ಸೇವೆಗೆ ಸೇರ್ಪಡೆಗೊಳ್ಳುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News