ಗಂಧಕದ ಡೈ ಆಕ್ಸೈಡ್ ಬಿಡುಗಡೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

Update: 2017-11-10 14:22 GMT

ಬೀಜಿಂಗ್, ನ. 10: ಗಂಧಕದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಭಾರತ ಚೀನವನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದಿದೆ ಎಂಬುದಾಗಿ ಅಮೆರಿಕದ ಅಧ್ಯಯನವೊಂದು ಹೇಳಿದೆ.

ಗಂಧಕದ ಡೈ ಆಕ್ಸೈಡ್ ಮಾಲಿನ್ಯಕಾರಕ ಅನಿಲವಾಗಿದ್ದು, ಮಾನವ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮವನ್ನು ಬೀರುತ್ತದೆ.

2007ರ ಬಳಿಕ ಚೀನಾದ ಗಂಧಕದ ಡೈ ಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣ 75 ಶೇಕಡದಷ್ಟು ಇಳಿದಿದೆ, ಆದರೆ, ಭಾರತದಲ್ಲಿ ಇದು 50 ಶೇಕಡದಷ್ಟು ಹೆಚ್ಚಿದೆ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ.

‘ಸಾಯಿಂಟಿಫಿಕ್ ರಿಪೋರ್ಟ್’ ಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಂಡ ವರದಿಯನ್ನು ಚೀನಾದ ಅಧಿಕೃತ ಮಾಧ್ಯಮಗಳು ವ್ಯಾಪಕವಾಗಿ ಪ್ರಕಟಿಸಿವೆ.

ಚೀನಾ ಮತ್ತು ಭಾರತ ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಬಳಕೆದಾರ ದೇಶಗಳಾಗಿವೆ. ಕಲ್ಲಿದ್ದಲಿನಲ್ಲಿ ಶೇ. 3 ಗಂಧಕವಿದೆ.

ಎರಡೂ ದೇಶಗಳಲ್ಲಿ, ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳು ಮತ್ತು ಕಲ್ಲಿದ್ದಲು ಉರಿಸುವ ಕಾರ್ಖಾನೆಗಳಿಂದ ಗಂಧಕದ ಡೈ ಆಕ್ಸೈಡ್ ವ್ಯಾಪಕವಾಗಿ ಹೊರಹೊಮ್ಮುತ್ತವೆ.

ಗಂಧಕದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ದೇಶವೊಂದು ಚೀನಾವನ್ನು ಹಿಂದಿಕ್ಕಿರುವುದು 20 ವರ್ಷಗಳಲ್ಲೇ ಇದು ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News