ಮೋದಿ ಜೇಟ್ಲಿಯವರನ್ನು ಕಿತ್ತೊಗೆಯಬೇಕು: ಯಶವಂತ ಸಿನ್ಹಾ

Update: 2017-11-10 14:31 GMT

ಪಾಟ್ನಾ,ನ.10: ಜಿಎಸ್‌ಟಿ ಕುರಿತಂತೆ ದೇಶದಲ್ಲಿ ಗೊಂದಲವನ್ನು ಸೃಷ್ಟಿಸುತ್ತಿರುವುದಕ್ಕಾಗಿ ಮತ್ತು ತೆರಿಗೆ ದರಗಳನ್ನು ಪದೇಪದೇ ಬದಲಾಯಿಸುತ್ತಿರುವುದಕ್ಕಾಗಿ ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಮಾಜಿ ವಿತ್ತಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡರು.

 ಜಿಎಸ್‌ಟಿ ಜಾರಿ ವಿಧಾನವನ್ನು ಟೀಕಿಸಿದ ಅವರು, ಜೇಟ್ಲಿಯವರು ವಿತ್ತಸಚಿವರಾಗಿ ತನ್ನ ಕಾರ್ಯ ನಿರ್ವಹಣೆ ವೇಳೆಗೆ ವಿವೇಚನೆಯನ್ನು ಬಳಸಿಲ್ಲ ಎಂಬಂತೆ ಕಂಡು ಬರುತ್ತಿದೆ ಮತ್ತು ಈ ತಪ್ಪಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವರಾಗಿ ಜೇಟ್ಲಿಯವರು ಜಿಎಸ್‌ಟಿಯನ್ನು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಿಸುವಲ್ಲಿ ಅಗ್ರ ಪಾತ್ರವನ್ನು ವಹಿಸಬೇಕಾಗಿತ್ತು. ಜಿಎಸಟಿ ವ್ಯವಸ್ಥೆಯು ತಪ್ಪುಗಳಿಂದ ಕೂಡಿದೆ ಮತ್ತು ಇದೇ ಕಾರಣಕ್ಕಾಗಿ ಜಿಎಸ್‌ಟಿ ಮಂಡಳಿಯು ಪ್ರತಿದಿನ ತಿದ್ದುಪಡಿಗಳನ್ನು ಮಾಡುತ್ತಿದೆ. ಜಿಎಸ್‌ಟಿಯನ್ನು ರೂಪಿಸುವಾಗ ಜೇಟ್ಲಿಯವರು ತನ್ನ ವಿವೇಚನೆಯನ್ನು ಬಳಸಲಿಲ್ಲ ಎಂದು ತಾನು ಭಾವಿಸಿದ್ದೇನೆ. ಪ್ರಧಾನಿಯವರು ಅವರ ಸ್ಥಾನದಲ್ಲಿ ಬೇರೊಬ್ಬ ದಕ್ಷ ವ್ಯಕ್ತಿಯನ್ನು ನೇಮಿಸಬೇಕು ಎದರು.

 ಜಿಎಸ್‌ಟಿಯಲ್ಲಿ ಆಗಿರುವ ಅಧ್ವಾನವನ್ನು ಸರಿಪಡಿಸಲು ಜಿಎಸ್‌ಟಿ ಕುರಿತು ಸುದೀರ್ಘ ಅಧ್ಯಯನ ನಡೆಸಿರುವ ಖ್ಯಾತ ಅರ್ಥಶಾಸ್ತ್ರಜ್ಞ ವಿಜಯ ಕೇಳಕರ್ ಅವರ ನೇತೃತ್ವದಲ್ಲಿ ನೂತನ ಸಮಿತಿಯೊಂದನ್ನು ಸರಕಾರವು ರೂಪಿಸಬೇಕು ಮತ್ತು ಭವಿಷ್ಯದಲ್ಲಿ ಅದನ್ನು ಸುಲಲಿತ ರೀತಿಯಲ್ಲಿ ಅನುಷ್ಠಾನಿಸಬೇಕು ಎಂದು ಸಿನ್ಹಾ ಹೇಳಿದರು.

ನೋಟು ಅಮಾನ್ಯ ಕ್ರಮ ವಿಫಲ

ನೋಟು ಅಮಾನ್ಯ ಕ್ರಮವು ಯಶಸ್ವಿಯಾಗಿದೆ ಎಂಬ ಮೋದಿಯವರ ಹೇಳಿಕೆಯನ್ನು ತಳ್ಳಿಹಾಕಿದ ಸಿನ್ಹಾ, ವಾಸ್ತವದಲ್ಲಿ ಈ ಕ್ರಮವು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಹೇಳಿದರು.

ನೋಟು ಅಮಾನ್ಯದ ಉದ್ದೇಶ ಈಡೇರಿಲ್ಲ, ಹೀಗಾಗಿ ಅದು ವಿಫಲಗೊಂಡಿದೆ. ಶೇ.99ರಷ್ಟು ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ಯಾವುದೇ ಕಪ್ಪುಹಣ ವಾಪಸಾಗಿಲ್ಲ. ಆದರೆ ಸರಕಾರವು ಅದು ಯಶಸ್ವಿಯಾಗಿದೆ ಎಂದು ಬಿಂಬಿಸಲು ಎಂದಿನಂತೆ ಸುಳ್ಳುಗಳ ನೆರವು ಪಡೆದುಕೊಳ್ಳುತ್ತಿದೆ ಎಂದು ಬಂಡುಕೋರ ಜೆಡಿಯು ನಾಯಕ ಉದಯ ನಾರಾಯಣ ಚೌಧರಿ ಅವರು ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿನ್ಹಾ ಹೇಳಿದರು.

ಮೋದಿ ಸರಕಾರವು ಭ್ರಷ್ಟಾಚಾರದ ವಿರುದ್ಧ ಹೋರಾಟ ಕುರಿತು ಗಂಭೀರವಾಗಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ವ್ಯವಹಾರಗಳ ಬಗ್ಗೆ ತನಿಖೆಗೆ ಏಕೆ ಆದೇಶಿಸಿಲ್ಲ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News