ತೆಲಂಗಾಣದಲ್ಲಿ ಉರ್ದು ಎರಡನೇ ಆಡಳಿತ ಭಾಷೆ: ಕೆಸಿಆರ್ ಘೋಷಣೆ

Update: 2017-11-10 14:37 GMT

ಹೈದರಾಬಾದ್,ನ.10: ತೆಲಂಗಾಣದಲ್ಲಿ ಉರ್ದು ಎರಡನೇ ಆಡಳಿತ ಭಾಷೆಯಾಗಿರುತ್ತದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ವಿಧಾನಸಭೆಯಲ್ಲಿ ಘೋಷಿಸಿದ್ದು, ಇದು ರಾಜ್ಯದಲ್ಲಿ ಭಾಷಾ ಕಾಳಗಕ್ಕೆ ನಾಂದಿ ಹಾಡಿದೆ. ಹಿಂದಿ ಅಥವಾ ಇಂಗ್ಲಿಷ್‌ನ್ನು ಎರಡನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಿಲ್ಲವೇಕೆ ಎಂದು ಬಿಜೆಪಿಯು ಪ್ರಶ್ನಿಸಿದೆ.

ಮುಖ್ಯಮಂತ್ರಿಗಳು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಬಿಜೆಪಿ ವಕ್ತಾರ ಕೃಷ್ಣ ಸಾಗರ ರಾವ್ ಅವರು, ಮುಖ್ಯಮಂತ್ರಿಗಳ ಈ ಮುಸ್ಲಿಂ ತುಷ್ಟೀಕರಣ ನಡೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ಮೊದಲು ಮುಸ್ಲಿಮರಿಗಾಗಿ ಪ್ರತ್ಯೇಕ ಐಟಿ ಕಾರಿಡಾರ್‌ನ್ನು ಪ್ರಕಟಿಸಿದ್ದರು. ಈಗ ಉರ್ದುವನ್ನು ಎರಡನೇ ಆಡಳಿತ ಭಾಷೆಯನ್ನಾಗಿ ಮಾಡುವ ಅವ್ಯವಹಾರಿಕ ಕ್ರಮವನ್ನು ಪ್ರಕಟಿಸಿದ್ದಾರೆ. ಮೌಲ್ಯ ವರ್ಧನೆಯ ಜೊತೆಗೆ ಉದ್ಯೋಗ ಇತ್ಯಾದಿಗಳಲ್ಲಿ ತಮಗೆ ನೆರವನ್ನೂ ನೀಡುವ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ಕ್ರಮದಿಂದ ಸಾರ್ವಜನಿಕ ಹಣ ಪೋಲಾಗುತ್ತದೆಯೇ ವಿನಃ ಇನ್ನೇನೂ ಸಾಧ್ಯವಿಲ್ಲ. ಹೀಗಾಗಿ ನಾವು ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದು ಹೇಳಿದರು.

 ಉರ್ದು ಭಾಷೆಯಲ್ಲಿಯೂ ಅರ್ಜಿಗಳನ್ನು ಸ್ವೀಕರಿಸುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಎಲ್ಲ ಸರಕಾರಿ ಕಚೇರಿಗಳಿಗೂ ರಾವ್ ಸೂಚಿಸಿದ್ದಾರೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಉರ್ದುದಲ್ಲಿಯೂ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News