×
Ad

​ಪರ್ಯಾಯ ಸಂಪ್ರದಾಯ ಮುರಿದ ಪೇಜಾವರ ಶ್ರೀ ?

Update: 2017-11-10 20:41 IST

ಉಡುಪಿ, ನ. 10: ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ಒಮ್ಮೆ ಪರ್ಯಾಯ ಪೀಠಾರೋಹಣ ಮಾಡಿದ ಬಳಿಕ ಅಷ್ಟಮಠಗಳ ಯಾವುದೇ ಸ್ವಾಮೀಜಿ ಎರಡು ವರ್ಷಗಳ ಕಾಲ ರಥಬೀದಿ ಹಾಗೂ ಮಠದ ಪರಿಸರವನ್ನು ಬಿಟ್ಟು ಹೊರಗೆ ತೆರಳುವಂತಿಲ್ಲ. ಆದರೆ ಚಪ್ಪರ ಮುಹೂರ್ತದಲ್ಲಿ ಭಾಗವಹಿಸುವ ಮೂಲಕ ಪೇಜಾವರ ಶ್ರೀ ಈ ಸಂಪ್ರದಾಯವನ್ನು ಮುರಿದಿದ್ದಾರೆ ಎನ್ನಲಾಗುತ್ತಿದೆ.

ಕಳೆದೊಂದು ವರ್ಷದಿಂದ ಪದೇ ಪದೇ ಬಾಧಿಸುತ್ತಿರುವ ಹರ್ನಿಯಾ ನೋವಿಗೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ನೀಡಿದ ಸಲಹೆಯಂತೆ ಶ್ರೀ ವಿಶ್ವೇಶತೀರ್ಥ ಸ್ವಾಮಿ ಕಳೆದ ಅ. 20ರಂದು ಮಣಿಪಾಲದ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದಲ್ಲದೇ ಇತ್ತೀಚೆಗೆ ಮತ್ತೊಂದು ಸಣ್ಣ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

ಇದು ಆರೋಗ್ಯದ ತುರ್ತು ವಿಷಯವಾದ್ದರಿಂದ, ಅಷ್ಟಮಠಗಳ ಉಳಿದ ಸ್ವಾಮೀಜಿಗಳ ಒತ್ತಾಯ ಹಾಗೂ ಒತ್ತಾಸೆಯಿಂದ ಪರ್ಯಾಯಶ್ರೀಗಳು ಮಠದಿಂದ ತೆರಳಲು ಒಪ್ಪಿಕೊಂಡಿದ್ದರು. ಆದರೆ ಈಗ ಅಂಥ ಯಾವುದೇ ಅನಿವಾರ್ಯತೆ ಇಲ್ಲದೆ ಪೇಜಾವರ ಶ್ರೀ ಇಂದು ಮಠದ ಪರಿಸರ ಬಿಟ್ಟು ತಮ್ಮ ಶಿಷ್ಯರೊಂದಿಗೆ ಕಾರಿನಲ್ಲಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್‌ಗೆ ತೆರಳಿ ಚಪ್ಪರ ಮುಹೂರ್ತದಲ್ಲಿ ಭಾಗವಹಿಸುವ ಮೂಲಕ ಕಳೆದ ಆರು ಶತಮಾನಗಳಿಂದ ತಪ್ಪದೇ ಅನುಸರಿಸಿಕೊಂಡು ಬಂದ ಸತ್‌ಸಂಪ್ರದಾಯ ವೊಂದನ್ನು ತಮ್ಮ ದಾಖಲೆಯ ಐದನೇ ಪರ್ಯಾಯ ಸಂದರ್ಭದಲ್ಲಿ ಮುರಿದಿದ್ದಾರೆ ಎಂದು ಮಠದ ಸಂಪ್ರದಾಯ ಶರಣ ಭಕ್ತರು ಪಿಸುಧ್ವನಿಯಲ್ಲಿ ಆಕ್ಷೇಪಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News