×
Ad

ಸ್ವಾಯತ್ತತೆ, ಸ್ವಾತಂತ್ರ್ಯ ಕರ್ನಾಟಕ ಕಟ್ಟಿದ ಟಿಪ್ಪು: ಪ್ರೊ.ಕೆ.ಫಣಿರಾಜ್

Update: 2017-11-10 20:46 IST

ಉಡುಪಿ, ನ.10: ಈ ದೇಶದ ಹೆಚ್ಚಿನ ಅರಸರು ಬ್ರಿಟಿಷರ ಅಡಿಯಾಳಾಗಿದ್ದರೆ, ಟಿಪ್ಪು ಮಾತ್ರ ಬ್ರಿಟಿಷರ ಕೈಗೆ ಸಿಗದೆ ಸ್ವಾಯತ್ತತೆ, ಸ್ವಾತಂತ್ರ ಹಾಗೂ ಸಶಕ್ತ ಸಂಪನ್ಮೂಲಗಳ ಕರ್ನಾಟಕವನ್ನು ಕಟ್ಟಿದರು. ಆದರೆ ವಿರೋಧಿಗಳು ಟಿಪ್ಪು ಸುಲ್ತಾನ್‌ರ ಈ ಅಂಶಗಳನ್ನು ಮರೆಮಾಚಿ ವಿವಾದಾತ್ಮಕ ವಿಚಾರಗಳನ್ನು ಮಾತ್ರ ಮುಂದೆ ತರುತ್ತಿದ್ದಾರೆ ಎಂದು ಹಿರಿಯ ಚಿಂತಕ, ಮಣಿಪಾಲ ಎಂಐಟಿಯ ಪ್ರೊ. ಕೆ. ಫಣಿರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಬ್ರಿಟಿಷರು ಟಿಪ್ಪುವಿನ ಸೈನ್ಯ, ತೋಳ್ಬಲಕ್ಕೆ ಹೆದರುತ್ತಿದ್ದಲ್ಲ. ಬದಲು ಆತ ಸೈನ್ಯ ದಲ್ಲಿ ಬಳಸುತ್ತಿದ್ದ ತಂತ್ರಜ್ಞಾನ ಮತ್ತು ವ್ಯಾಪಾರದ ಕೌಶಲ್ಯಕ್ಕೆ. 1780ರಿಂದ ಟಿಪ್ಪು ಸಾಯುವವರೆಗೆ ಮೈಸೂರು ಸಂಸ್ಥಾನದ ತಲಾ ಆದಾಯವು ಬ್ರಿಟನ್‌ಗಿಂತ ಹೆಚ್ಚು ಇತ್ತು. ಬ್ರಿಟನ್‌ನ ತಲಾ ವರಮಾನ 106 ಡಾಲರ್ ಇದ್ದರೆ ಮೈಸೂರು ಸಂಸ್ಥಾನದ ವರಮಾನ 120 ಡಾಲರ್ ಇತ್ತು. ಜಗತ್ತಿನಲ್ಲಿ ಫ್ರಾನ್ಸ್ ನಂತರ ಕರ್ನಾಟಕದ ಮೈಸೂರು ಸಂಸ್ಥಾನ ಅತಿ ಹೆಚ್ಚು ತಲಾ ವರಮಾನ ಹೊಂದಿದ್ದ ಪ್ರದೇಶವಾಗಿತ್ತು. ಇದು ಬ್ರಿಟಿಷರಲ್ಲಿ ನಡುಕ ಹುಟ್ಟಿಸುತ್ತಿತ್ತು ಎಂದರು.

ಕರ್ನಾಟಕದ ಅಭಿವೃದ್ದಿ ಪರ್ವವು ಟಿಪ್ಪು ಆಡಳಿತಾವಧಿಯಿಂದಲೇ ಪ್ರಾರಂಭವಾಯಿತು. ರಾಜ್ಯದಲ್ಲಿ ಪಾಳೇಗಾರಿಕೆಯನ್ನು ರದ್ದುಪಡಿಸಿ, ಕೃಷಿ ಭೂಮಿಯನ್ನು ಗೇಣಿದಾರರಿಗೆ ನೀಡುವ ಮೂಲಕ ಭೂ ಸುಧಾರಣೆಯ ಹರಿಕಾರರಾದರು. ಅಲ್ಲದೆ ಗೇಣಿದಾರರಿಗೆ ಬಡ್ಡಿ ರಹಿತ ಸಾಲ ಹಾಗೂ ಕೃಷಿ ನೀರಾವರಿ ವ್ಯವಸ್ಥೆಗಾಗಿ ಕೆರೆಗಳು ಹಾಗೂ ಅಣೆಕಟ್ಟುಗಳನ್ನು ಕಟ್ಟಲು ಕಾರಣಕರ್ತರಾದರು. ಕನ್ನಂಬಾಡಿ ಅಣೆಕಟ್ಟೆಗೆ ಶಿಲಾನ್ಯಾಸ ಮಾಡಿದ್ದರು ಎಂದು ಅವರು ತಿಳಿಸಿದರು.

ಬ್ರಿಟೀಷರ ವಿರುದ್ಧ  ಹೋರಾಡಲು ಸಧೃಡ ಸೈನ್ಯದ ಕಟ್ಟುವ ಮೂಲಕ ಒಕ್ಕೂಟ ವ್ಯವಸ್ಥೆ ರಚನೆಗೆ ಮುಂದಾಗಿದ್ದ ಟಿಪ್ಪು, ಫ್ರೆಂಚ್ ಸೈನ್ಯದ ತಂತ್ರಗಾರಿಕೆಯನ್ನು ಪಡೆದು ರಾಕೆಟ್‌ಗಳನ್ನು ಅಭಿವೃದ್ಧಿ  ಪಡಿಸಿದ್ದರು. ವೈಜ್ಞಾನಿಕ ರೀತಿಯಲ್ಲಿ ತೂಕ ಮತ್ತು ಅಳತೆ ವ್ಯವಸ್ಥೆ ಹಾಗೂ ಲೆಕ್ಕ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಪರಿಚಯಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ. ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದ ಟಿಪ್ಪು, ಶ್ರೀಗಂಧದ ಗೊಂಬೆಗಳ ತಯಾರಿ ಕಾರ್ಖಾನೆ ಪ್ರಾರಂಭಿಸಿದ್ದರು ಎಂದರು.

ಇಡೀ ಭಾರತದಲ್ಲಿ ತನ್ನನ್ನು ಸಿಟಿಜನ್ ಟಿಪ್ಪು ಎಂಬುದಾಗಿ ಕರೆಸಿಕೊಂಡ ಪ್ರಥಮ ಅರಸ ಟಿಪ್ಪು ಸುಲ್ತಾನ್. ಟಿಪ್ಪುವಿನ ಆಡಳಿತ ಅವಧಿಯ 37 ವರ್ಷ ಗಳಲ್ಲಿ ಆತನನ್ನು ಸೋಲಿಸಲು ಬ್ರಿಟಿಷರು ಮೂರು ವೈಸರಾಯ್‌ಗಳನ್ನು ಬದಲಾಯಿಸಿದರು. ಯಾಕೆಂದರೆ ಟಿಪ್ಪು ಬ್ರಿಟಿಷರ ಬಹಳ ದೊಡ್ಡ ವೈರಿಯಾಗಿದ್ದರು. ಟಿಪ್ಪುವನ್ನು ಕೇವಲ ಒಬ್ಬ ಮುಸಲ್ಮಾನ್ ಎಂಬ ದೃಷ್ಠಿಯಿಂದ ನೋಡದೆ ಒಬ್ಬ ಕನ್ನಡಿಗ ಎಂಬುದಾಗಿ ನೋಡಬೇಕಾಗಿದೆ ಎಂದು ಅವರು ತಿಳಿಸಿದರು.

ದಫ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ನಾಡಿನ ಸ್ವಾತ್ರಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ಬಲಿ ದಾನ ಮಾಡಿದ್ದರು. ಆದರೆ ಚುನಾವಣಾ ಉದ್ದೇಶದಿಂದ ಇತಿಹಾಸವನ್ನು ತಿರುಚುವ ಕೆಲಸ ಕೆಲವರಿಂದ ನಡೆಯುತ್ತಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ ಪಾಟೀಲ್, ಜಿಪಂ ಸಿಇಒ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದ ಟಿಪ್ಪು ಸುಲ್ತಾನ್ ಕುರಿತ ಕಿರುಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸ ಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ ಸ್ವಾಗತಿಸಿದರು. ಪೌರಾಯಕ್ತ ಮಂಜುನಾಥಯ್ಯ ವಂದಿಸಿದರು. ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

ವಿವಾದಾತ್ಮಕಗಳಿಗೆ ಕ್ಲಾಕ್ ಟವರ್‌ನಲ್ಲಿ ಉತ್ತರಿಸುವೆ!
ಈಗ ಮಾತನಾಡಲಿರುವ ಮಾತು ನನ್ನದು. ನಾಗರಿಕನಾಗಿ ನನ್ನದು ಮಾತ್ರ. ರಾಷ್ಟ್ರಪತಿ ಆಡಿದ ಸ್ವತಃ ಮಾತಿಗೆ ವಿವಾದ ಆಗುವ ಸಂದರ್ಭದಲ್ಲಿ ಈ ಮಾತನ್ನು ನಾನು ಬರೆದುಕೊಂಡಿದ್ದೇನೆಯೇ ಹೊರತು ಜಿಲ್ಲಾಡಳಿತ ಬರೆದು ಕೊಟ್ಟಿಲ್ಲ ಎಂದು ತನ್ನ ಉಪನ್ಯಾಸವನ್ನು ಆರಂಭಿಸಿದ ಪ್ರೊ. ಫಣಿರಾಜ್, ವಿವಾದತ್ಮಾಕ ವಿಚಾರಗಳ ಬಗ್ಗೆ ಮಾತನಾಡದಂತೆ ಎಚ್ಚರಿಕೆಯನ್ನು ಜಿಲ್ಲಾಡಳಿತ ಕೊಟ್ಟಿದ್ದು, ಆದುದರಿಂದ ಧನಾತ್ಮಕ ವಿಚಾರಗಳನ್ನು ಮಾತ್ರ ಹೇಳುತ್ತಿದ್ದೇನೆ ಎಂದರು.

ವಿರೋಧಿಗಳ ವಿವಾದಾತ್ಮಕ ವಿಚಾರಗಳಿಗೆ ನಮ್ಮಲ್ಲಿ ಉತ್ತರ ಇಲ್ಲ ಅಂತ ಅಲ್ಲ. ಅದಕ್ಕೆ ಸಮಯ, ಅಧ್ಯಯನ, ಚರ್ಚೆ ಮಾಡುವ ಮನಸ್ಸು ಬೇಕಾಗಿದೆ. ಅದು ವಿರೋಧಿಗಳಲ್ಲಿ ಇಲ್ಲ. ಟಿಪ್ಪು ಜಯಂತಿಗೆ ನಾವು ಇಷ್ಟೊಂದು ಪೊಲೀಸ್ ವ್ಯವಸ್ಥೆಯನ್ನು ಇಟ್ಟುಕೊಂಡು ಭಾಷಣ ಮಾಡಬೇಕಾಗಿದೆ. ನಾನು ವಿವಾದಾತ್ಮಕ ವಿಚಾರಗಳನ್ನು ನಗರದ ಕ್ಲಾಕ್ ಟವರ್ ಎದುರು ನಿಂತು ಮಾತನಾಡುತ್ತೇನೆ. ಎಸ್ಪಿಯವರು ನನಗೆ ಬೆಂಗಾವಲಾಗಿ ನಿಲ್ಲಲಿ ಎಂದು ಫಣಿರಾಜ್ ತಿಳಿಸಿದರು.

ವಿರೋಧದ ಹಿನ್ನೆಲೆ: ಹಾಲ್ ಬದಲಾವಣೆ
ಟಿಪ್ಪು ಜಯಂತಿಯ ಪೂರ್ವಭಾವಿ ಸಭೆಯಲ್ಲಿನ ನಿರ್ಧಾರದಂತೆ ರಜ ತಾದ್ರಿಯ ಜಿಪಂ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಆಮಂತ್ರಣ ಪತ್ರಿಕೆಯಲ್ಲಿ 50-100 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಇರುವ ಜಿಲ್ಲಾಧಿಕಾರಿ ಕೋರ್ಟ್ ಹಾಲ್ ಎಂಬುದಾಗಿ ನಮೂದಿಸ ಲಾಗಿತ್ತು. ಇದಕ್ಕೆ ಸಂಘಟನೆಯ ಮುಖಂಡರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ ಇಂದು ಬೆಳಗ್ಗೆ ಇಡೀ ಕಾರ್ಯಕ್ರಮವನ್ನು 500 ಮಂದಿಯ ಆಸನ ಇರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣಕ್ಕೆ ವರ್ಗಾಯಿಸಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಹೂಡೆಯ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಧಪ್ ಕಾರ್ಯಕ್ರಮ ಆಕರ್ಷಣೀಯವಾಗಿತ್ತು. ‘ಈ ದೇಶ ನಮ್ಮ ಭಾರತ, ಇದು ನಮಗೆ ಶಾಶ್ವತ’ ಎಂಬ ಬ್ಯಾರಿ ಹಾಡು ಮತ್ತು ‘ಬಾ ಗೆಳೆಯ ಬಾ ನಾವು ಒಂದಾಗುವ ನಾವು ಭಾರತೀಯರು’ ಎಂಬ ಕನ್ನಡ ಹಾಡು ಮನ ತಟ್ಟುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News