×
Ad

ಜೆಎನ್‌ಯು ವಿವಿ: ಬಿರಿಯಾನಿ ತಯಾರಿಸಿ ತಿಂದ ವಿದ್ಯಾರ್ಥಿಗಳಿಗೆ ದಂಡ

Update: 2017-11-10 21:19 IST

ಹೊಸದಿಲ್ಲಿ, ನ.10: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಆಡಳಿತಾಂಗ ಕಟ್ಟಡದ ಎದುರು ಬಿರಿಯಾನಿ ತಯಾರಿಸಿ ತಿಂದ ನಾಲ್ವರು ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಆಡಳಿತ ಮಂಡಳಿ, ಭವಿಷ್ಯದಲ್ಲಿ ಇಂತಹ ಕೃತ್ಯಗಳು ಪುನರಾವರ್ತನೆಯಾಗಬಾರದು ಎಂದು ಎಚ್ಚರಿಸಿದೆ.

  ಜೆಎನ್‌ಯು ವಿದ್ಯಾರ್ಥಿ ಮಂಡಳಿಯ ಅದ್ಯಕ್ಷ ಮೋಹಿತ್ ಕುಮಾರ್ ಪಾಂಡೆ ಮತ್ತು ಕಾರ್ಯದರ್ಶಿ ಸತ್ರೂಪ ಚಕ್ರವರ್ತಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸಲು ಉಪಕುಲಪತಿಯವರನ್ನು ಭೇಟಿ ಮಾಡಲು ಹೋಗಿದ್ದರು. ಇವರನ್ನು ಕಚೇರಿಯ ಹೊರಗಡೆ ಹಲವು ಗಂಟೆ ಕಾಯಿಸಲಾಗಿದೆ. ಇದರಿಂದ ಬೇಸತ್ತ ಅವರು ಆಫೀಸಿನ ಹೊರಭಾಗದಲ್ಲಿ ಬಿರಿಯಾನಿ ಬೇಯಿಸಿ ತಿನ್ನಲು ನಿರ್ಧರಿಸಿದರು ಎನ್ನಲಾಗಿದೆ. ವಿದ್ಯಾರ್ಥಿಗಳ ಈ ರೀತಿಯ ಪ್ರತಿಭಟನೆ ಶಿಸ್ತು ಮತ್ತು ನಡವಳಿಕೆಯ ಉಲ್ಲಂಘನೆಯಾಗಿದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದ್ದು, ಘಟನೆಯಲ್ಲಿ ಒಳಗೊಂಡ ನಾಲ್ವರಿಗೆ 6,000 ರೂ.ನಿಂದ 10,000 ರೂ.ವರೆಗೆ ದಂಡ ವಿಧಿಸಿದೆ. 10 ದಿನದ ಒಳಗೆ ದಂಡ ಪಾವತಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

 ಆದರೆ ಜೆಎನ್‌ಯು ವಿವಿಯಲ್ಲಿ ಇಂತಹ ಚಟುವಟಿಕೆಗಳು ಸರ್ವೇಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ವಾಸ್ತವ್ಯ ಹೂಡಿರುವ ಆವರಣದಲ್ಲಿ ನಡೆಯುವ ಇಂತಹ ಚಟುವಟಿಕೆಗಳು ದೇಶದ ವಿವಿಧೆಡೆಯಿಂದ ಆಗಮಿಸಿ ಇಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಪರಸ್ಪರ ಸೌಹಾರ್ದ ಸಂಬಂಧ ವರ್ಧಿಸಲು ಕಾರಣವಾಗುತ್ತದೆ ಎಂದು ವಿದ್ಯಾರ್ಥಿ ಮಂಡಳಿಯ ಕಾರ್ಯದರ್ಶಿ ಸತ್ರೂಪ ಚಕ್ರವರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News