×
Ad

ಉಡುಪಿ: ಧರ್ಮಸಂಸದ್‌ಗೆ ಚಪ್ಪರ ಮುಹೂರ್ತ

Update: 2017-11-10 21:59 IST

ಉಡುಪಿ, ನ.10: ಮೂರು ದಿನಗಳ ಕಾಲ ಉಡುಪಿಯಲ್ಲಿ ನಡೆಯುವ ಧರ್ಮಸಂಸದ್‌ನಲ್ಲಿ ಸಂವಿಧಾನದ ಚೌಕಟ್ಟಿನೊಳಗೆ ಅತ್ಯಂತ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈ ಧರ್ಮಸಂಸದ್ ಮೂಲಕ ಹಿಂದೂ ಸಂಸ್ಕೃತಿ, ಸಂಪ್ರದಾಯ ಉಳಿಯಲು ಎಲ್ಲರಿಗೂ ಸ್ಪೂರ್ತಿ ದೊರಕುವಂತಾಗಲಿ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘಟನೆಗಳ ಸಹಯೋಗದೊಂದಿಗೆ ನ. 24ರಿಂದ 26ರವರೆಗೆ ಉಡುಪಿಯಲ್ಲಿ ನಡೆಯುವ ಧರ್ಮಸಂಸದ್‌ಗಾಗಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ಸ್‌ನಲ್ಲಿ ಇಂದು ಚಪ್ಪರ ಮುಹೂರ್ತವನ್ನು ನೆರವೇರಿಸಿದ ಸ್ವಾಮೀಜಿ ಆಶೀರ್ವಚನ ನೀಡುತಿದ್ದರು.

ಹಿಂದೂ ಸಮಾಜದ ಅನೇಕ ಸಮಸ್ಯೆಗಳಿಗೆ ಇಲ್ಲಿ ಸೂಕ್ತ ಪರಿಹಾರ ನೀಡಬೇಕಾಗಿದೆ. ದೇಶದಾದ್ಯಂತದಿಂದ ಬರುವ 2500ಕ್ಕೂ ಅಧಿಕ ಸಂತರು ಸೇರಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದರೊಂದಿಗೆ ಹಿಂದೂ ವೈಭವವನ್ನು ಸಾರುವ ವಸ್ತು ಪ್ರದರ್ಶನ ನಡೆಯಲಿದೆ. ಇವು ಪ್ರತಿಯೊಬ್ಬ ಹಿಂದೂವಿಗೂ ಸ್ಪೂರ್ತಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕರಿಂಜೆ ಮಠದ ಶ್ರೀಮುಕ್ತಾನಂದ ಸ್ವಾಮೀಜಿ, ಸಂಘ ಪರಿವಾರದ ಪ್ರಮುಖ ನಾಯಕರಾದ ಶಂಭು ಶೆಟ್ಟಿ, ಸೋಮಶೇಖರ್ ಭಟ್, ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಸುನೀಲ್ ಕೆ.ಆರ್., ವಿಲಾಸ್ ನಾಯಕ್, ಸುಬ್ರಹ್ಮಣ್ಯ ಹೊಳ್ಳ, ರಾಯಲ್ ಗಾರ್ಡನ್‌ನ ಮಾಲಕ ರತ್ನಾಕರ ಶೆಟ್ಟಿ, ಗೌತಮ್ ಅಗರ್ವಾಲ್, ಸಂತೋಷ್ ಸುವರ್ಣ ಬೊಳ್ಜೆ, ದಿನೇಶ್ ಮೆಂಡನ್ ಮುಂತಾದವರು ಉಪಸ್ಥಿತರಿದ್ದರು.

ಧರ್ಮಸಂಸದ್ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರೆ, ಅಚ್ಚುತ ಕಲ್ಮಾಡಿ ವಂದಿಸಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News