1000 ರನ್ ಗಳ ಸರದಾರ ಧನವಾಡೆಗೆ ವಿದ್ಯಾರ್ಥಿವೇತನ ನೀಡದಂತೆ ಹೆತ್ತವರ ಮನವಿ..!

Update: 2017-11-12 10:03 GMT

ಮುಂಬೈ, ನ.12: ಕಳೆದ ವರ್ಷ ಅಂತರ್‌ಶಾಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಅಜೇಯ 1,009 ರನ್ ಗಳಿಸಿದ ಶಾಲಾ ಬಾಲಕ ಪ್ರಣವ್ ಧನವಾಡೆ ಹೆಸರು ನಿಮಗೆ ನೆನಪಿರಬಹುದು. ಜನವರಿ 2016ರಲ್ಲಿ ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿ ತನ್ನ ಹೆಸರಲ್ಲಿ ಹೊಸ ದಾಖಲೆ ಬರೆದ 15ರ ಹರೆಯದ ಶಾಲಾ ಬಾಲಕ ಪ್ರಣವ್ ಧನವಾಡೆ ಅವರಿಗೆ ಈ ಸಾಧನೆಯ ಬಳಿಕ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ವಿದ್ಯಾರ್ಥಿ ವೇತನ ಪ್ರಕಟಿಸಿತ್ತು.

 ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಪ್ರಣವ್ ತಿಂಗಳಿಗೆ 10,000 ರೂ.ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಅವರಿಗೆ ಎಂಸಿಸಿ ವಿದ್ಯಾರ್ಥಿ ವೇತನ ನೀಡುವ ಭರವಸೆ ನೀಡಿತ್ತು.

ಆದರೆ ಎಂಸಿಎಯಿಂದ ವಿದ್ಯಾರ್ಥಿ ವೇತನ ಪಡೆಯಲು ಆರಂಭಿಸಿದ ಬಳಿಕ ಪ್ರಣವ್ ಅವರ ಫಾರ್ಮ್ ಕುಸಿದಿದೆ. ಕಳಪೆ ಪ್ರದರ್ಶನದಿಂದಾಗಿ ಅಂಡರ್ -19 ತಂಡದಲ್ಲೂ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅವರ ಪ್ರದರ್ಶನ ನಿರೀಕ್ಷಿತ ಮಟ್ಟ ತಲುಪಿಲ್ಲ.

ಪ್ರಣವ್ ಫಾರ್ಮ್ ಕಂಡುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರ ಹೆತ್ತವರು ಪ್ರಣವ್‌ಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವಂತೆ ಎಂಸಿಎಗೆ ಪತ್ರ ಬರೆದಿದ್ದಾರೆ.

‘‘ಪ್ರಣವ್ 1,009 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವುದನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡುತ್ತಿರುವುದಕ್ಕೆ ನಾವು ಅಭಾರಿಯಾಗಿದ್ದೇವೆ. ಆದರೆ ಈ ಸಾಧನೆಯ ಬಳಿಕ ಪ್ರಣವ್ ಪ್ರದರ್ಶನ ತೃಪ್ತಿಕರವಾಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಆತನ ಪ್ರದರ್ಶನ ಚೆನ್ನಾಗಿಲ್ಲ. ಈ ಕಾರಣದಿಂದಾಗಿ ವಿದ್ಯಾರ್ಥಿ ವೇತನ ಪಡೆಯುವುದು ಸರಿಯಲ್ಲ. ಹೀಗಾಗಿ ವಿದ್ಯಾರ್ಥಿ ವೇತನವನ್ನು ಕೂಡಲೇ ನಿಲ್ಲಿಸುವಂತೆ ಎಂಸಿಎಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ಪ್ರಣವ್ ಅವರು ಪ್ರದರ್ಶನ ಚೆನ್ನಾಗಿದ್ದರೆ ಪ್ರಣವ್‌ಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಎಂಸಿಎ ಯೋಚಿಸಬಹುದು’’ ಎಂದು ಪ್ರಣವ್ ತಂದೆ ಪ್ರಶಾಂತ್ ತಿಳಿಸಿರುವುದಾಗಿ ‘‘ ಮಿಡ್ ಡೇ’ಗೆ ವರದಿ ಮಾಡಿದೆ.

 1,009 ರನ್ ಗಳಿಸಿದ ಬಳಿಕ ಪ್ರಣವ್ ಅವರು ಏರ್ ಇಂಡಿಯಾ ಮತ್ತು ದಾದರ್ ಯೂನಿಯನ್ ತಂಡದ ಪರ ಆಡಿದ್ದರು. ಆದರೆ ಇದೀಗ ಉಭಯ ತಂಡಗಳು ಬೇರೆ ತಂಡಗಳನ್ನು ಆಯ್ದುಕೊಳ್ಳುವಂತೆ ಅವರಿಗೆ ಸಲಹೆ ನೀಡಿದೆ.

  ಪ್ರಣವ್ ಅವರ ಹೆತ್ತವರು ವಿದ್ಯಾರ್ಥಿ ವೇತನವನ್ನು ನಿಲ್ಲಿಸುವಂತೆ ಪತ್ರ ಬರೆಯಲು ಇನ್ನೊಂದು ಕಾರಣವಿದೆ. ಪ್ರಣವ್ ವಿದ್ಯಾರ್ಥಿ ವೇತನ ಪಡೆಯುವ ವಿಚಾರದಲ್ಲಿ ಕೆಲವು ಮಂದಿ ಟೀಕೆ ಮಾಡುತ್ತಿದ್ದಾರೆ. ‘ಪ್ರಣವ್ 1,009 ರನ್ ದಾಖಲಿಸಿ ಸಾಕಷ್ಟು ಹಣ ಮಾಡಿದ್ದಾರೆ. ಈ ಕಾರಣದಿಂದಾಗಿ ಅವರು ಮುಂದೆ ಯಾವುದೇ ಕ್ರಿಕೆಟ್ ಆಡಬೇಕಿಲ್ಲ. ಅಲ್ಲದೆ ಬಾಂದ್ರಾದಲ್ಲಿ ಒಂದು ಮನೆ ಸಿಕ್ಕಿದೆ ಎಂದು ಜನರು ಹೇಳುತ್ತಿದ್ದಾರೆ. ಜನರ ಇಂತಹ ಮಾತು ಕೇಳಿ ನಮ್ಮ ಮನಸ್ಸಿಗೆ ನೋವಾಗಿದೆ’’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರಣವ್ ಧನವಾಡೆ ಮುಂದೆ ಉತ್ತಮ ಕ್ರಿಕೆಟ್‌ನಾಗಿ ಬೆಳೆಯಲು ಹೆಚ್ಚಿನ ಗಮನ ನೀಡಲಿದ್ದಾರೆ ಎಂದು ಅವರ ತ  ಂದೆ ಪ್ರಶಾಂತ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News