ಕನಕನ ಕಿಂಡಿಯಿಂದಲೇ ಶ್ರೀಕೃಷ್ಣನ ದರ್ಶನ ಪಡೆದ ಕಾಗಿನೆಲೆ ಸ್ವಾಮೀಜಿ
ಉಡುಪಿ, ನ.12: ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಐತಿಹಾಸಿಕ ಭೇಟಿ ನೀಡಿದ ಶ್ರೀಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ ಶ್ರೀನಿರಂಜನಾನಂದಪುರಿ ಮಹಾ ಸ್ವಾಮಿ, ಮಠದ ಒಳಗೆ ಪ್ರವೇಶಿಸದೆ ಹೊರಗಿನ ಕನಕನ ಕಿಂಡಿಯಿಂದಲೇ ಶ್ರೀಕೃಷ್ಣನ ದರ್ಶನ ಪಡೆದು ವಾಪಾಸ್ಸಾಗಿದ್ದಾರೆ.
ಕಾಗಿನೆಲೆ ಕನಕ ಗುರುಪೀಠದ ಮಹಾಸ್ವಾಮಿಗಳು ಪ್ರಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಹಾಲು ಮತ ಮಹಾಸಭಾದ ವತಿಯಿಂದ ಪುರಪ್ರವೇಶ ಸಮಾರಂಭವನ್ನು ಹಮ್ಮಿಕೊಳ್ಳ ಲಾಗಿತ್ತು. ಅದರಂತೆ ಜೋಡುಕಟ್ಟೆಯಲ್ಲಿ ಮಹಾಸ್ವಾಮಿಗಳ ಪುರಪ್ರವೇಶದ ಮೆರವಣಿಗೆಗೆ ಮಾಜಿ ಸಚಿವ ಬಂೆಪ್ಪ ಕಾಶೆಂಪೂರ ಚಾಲನೆ ನೀಡಿದರು.
ಜಾನಪದ ಕಲಾತಂಡಗಳು, ಚಂಡೆ, ಮದ್ದಳೆ, ಸ್ತಬ್ಧ ಚಿತ್ರಗಳು, ಪೂರ್ಣ ಕುಂಬ ಮೇಳದ ವೈಭವದ ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗೆ ಆಗಮಿಸಿತು. ಬಳಿಕ ಕಾಗಿನೆಲೆ ಸ್ವಾಮೀಜಿ ರಥಬೀದಿಯಲ್ಲಿರುವ ಕನಕ ಗುಡಿಯಲ್ಲಿ ಕನಕ ಮೂರ್ತಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರ ಕನಕನ ಕಿಂಡಿಯ ಬಳಿ ತೆರಳಿದ ಸ್ವಾಮೀಜಿ ಆ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಈ ಸಂದರ್ಭ ದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಈ ವೇಳೆ ಸ್ವಾಮೀಜಿಯನ್ನು ಮಠಕ್ಕೆ ಕರೆದುಕೊಂಡು ಹೋಗಲು ಮಠದ ದಿವಾನ ರಘುರಾಮ ಆಚಾರ್ಯ ಮಠದ ದ್ವಾರದಲ್ಲಿ ನಿಂತಿದ್ದರು. ಆದರೆ ಸ್ವಾಮೀಜಿ ಮಠದ ಒಳಗೆ ಹೋಗದೆ ನೇರ ರಾಜಾಂಗಣದಲ್ಲಿ ನಡೆಯುತ್ತಿರುವ ಕನಕದಾಸರ ಜಯಂತೋತ್ಸವ ಕಾರ್ಯಕ್ರಮಕ್ಕೆ ಶ್ರೀಕೃಷ್ಣ ಮಠದ ಎದುರಿನಿಂದಲೇ ನಡೆದುಕೊಂಡು ಹೋದರು. ಸಂಜೆ ಕಾರ್ಯಕ್ರಮ ಮುಗಿದ ಬಳಿಕವೂ ಸ್ವಾಮೀಜಿ ಮಠದೊಳಗೆ ಹೋಗದೆ ಕಾಗಿನೆಲೆಗೆ ಮರಳಿದರು ಎಂದು ಮೂಲ ಗಳು ತಿಳಿಸಿವೆ.
ಕನಕದಾಸರು ಶ್ರೀಕೃಷ್ಣನ ದರ್ಶನ ಮಾಡಿದ ಕನಕನ ಕಿಂಡಿಯಿಂದಲೇ ನಾನು ಕೂಡ ಶ್ರೀಕೃಷ್ಣನ ದರ್ಶನ ಪಡೆದಿರುವುದರಿಂದ ನನಗೆ ತುಂಬಾ ಸಂತೋಷ ಆಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಮಹಾ ಸ್ವಾಮಿ ಹೇಳಿರುವುದಾಗಿ ಕಾರ್ಯಕ್ರಮ ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ.