ನ.13ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ
ಬೆಳ್ತಂಗಡಿ, ನ. 12: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ನ. 13 ರಿಂದ 18ರ ವರೆಗೆ ನಡೆಯಲಿದ್ದು ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ 85ನೆ ಅಧಿವೇಶನ ನ. 16 ಮತ್ತು 17 ರಂದು ನಡೆಯಲಿದೆ.
ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನ. 13 ರಿಂದ 18ರ ವರೆಗೆ ನಡೆಯಲಿವೆ. ಧಾರ್ಮಿಕ ಕಾರ್ಯಕ್ರಮವಾಗಿ ನ. 13 ರಿಂದ 17ರ ವರೆಗೆ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಪ್ರತಿದಿನ ರಾತ್ರಿ 9 ಗಂಟೆಯ ನಂತರ ನಡೆಯಲಿದೆ. ನ. 18 ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಲಕ್ಷದೀಪೋತ್ಸವಕ್ಕೆ ಶ್ರೀಕ್ಷೇತ್ರ ಸಿಂಗಾರಗೊಂಡಿದ್ದು ಇಡೀ ನಗರವನ್ನು ಅಲಂಕರಿಸಲಾಗಿದೆ. ಕಣ್ಮನ ಸೆಳೆಯುವ ವಿಧ್ಯುತ್ ಅಲಂಕಾರಗಳು ಜನರನ್ನು ಆಕರ್ಷಿಸುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರನ್ನು ಎದುರುಗೊಳ್ಳಲು ಕ್ಷೇತ್ರ ಸಿದ್ದಗೊಂಡಿದ್ದು ಎಲ್ಲ ಅಗತ್ಯ ಸೌಲಭ್ಯಗಳನ್ನೂ ಮಾಡಲಾಗಿದೆ. ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಲಾಗಿದೆ.
ನ. 13 ರಂದು ಸಂಜೆ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 5 ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಶ್ರೀ ಮಂಜುನಾಧ ಸ್ವಾಮಿ ಹೈಸ್ಕೂಲ್‌ನ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ವಸ್ತುಪ್ರದರ್ಶನ ಸಿದ್ದಗೊಂಡಿದ್ದು ರಾಜ್ಯದ ವಿವಧ ಭಾಗಗಳಿಂದ ಆಗಮಿಸಿರುವ ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿದೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಾಂಸ್ಕ್ರತಿಕ ಕಾರ್ಯಕ್ರಮಗಳೂ ನಡೆಯಲಿದೆ. ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಗಳು.
ಲಕ್ಷ ದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಗಳು ನ. 16 ಹಾಗೂ 17ರಂದು ನಡೆಯಲಿದೆ. ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ತಮಿಳುನಾಡಿನ ವೆಲ್ಲೂರು ತಿರುಮಲೈಕೋಡಿ ಶ್ರೀ ನಾರಾಯಣೀ ಪೀಠಮ್‌ನ ಶ್ರೀಶಕ್ತಿ ಅಮ್ಮ ಉದ್ಘಾಟಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಜಾವಾಣಿ ದೈನಿಕದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಮಾಜಿ ಶಾಸಕ ಶಫಿ ಅಹಮ್ಮದ್ ತುಮಕೂರು ಮತ್ತು ಬೆಂಗಳೂರಿನ ಸೈಂಟ್ ಪೀಟರ್ಸ್ ಪಾಂಟಿಫಿಕಲ್ ಇನ್‌ಸ್ಟಿಟ್ಯೂಟ್ ಕುಲಪತಿ ಫಾ ಅಂತೋನಿ ರಾಜ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ನ. 17ರಂದು ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನ ನಡೆಯಲಿದ್ದು ಸಾಹಿತಿ ಸುಧಾಮೂರ್ತಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಿಮರ್ಶಕ ಬೆಂಗಳೂರಿನ ಎಸ್. ಆರ್. ವಿಜಯಶಂಕರ್, ಸಾಹಿತಿ ಬೆಂಗಳೂರಿನ ರಂಜಾನ್ ದರ್ಗಾ ಮತ್ತು ಸಾಹಿತಿ ಮಂಗಳೂರಿನ ಪ್ರೊ. ಭುವನೇಶ್ವರಿ ಹೆಗಡೆ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಲಲಿತಗೋಷ್ಠಿ:
ನ. 15 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಮಧ್ಯಾಹ್ನ ಗಂಟೆ 3 ರಿಂದ ವಿವಿಧ ಕಲಾವಿದರಿಂದ ವಾದ್ಯ ಕಚೇರಿ, ಬಳಿಕ ಗಾಯಕಿ ಎಂಡಿ. ಪಲ್ಲವಿ ಅವರಿಂದ ಸುಗಮ ಸಂಗೀತ, ನಂತರ ಧಾರವಾಡದ ಸರಳಬಾಯಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾನ ವೈಭವ, ಆ ಬಳಿಕ ಶಿರಸಿಯ ಬಾಲ ಕಲಾವಿದೆ ತುಳಸಿ ಹೆಗಡೆ ಅವರಿಂದ ವಿಶ್ವಶಾಂತಿ ಎಂಬ ಯಕ್ಷಗಾನ ರೂಪಕ ಪ್ರದರ್ಶನಗೊಳ್ಳಲಿದೆ. ಕೊನೆಯಲ್ಲಿ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಲಲಿತಕಲಾ ವಿಶ್ವ ವಿದ್ಯಾಲಯ ಮೈಸೂರು ಇಲ್ಲಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಲಲಿತಕಲಾ ಸಂಭ್ರಮ ನಡೆಯಲಿದೆ. ರಾತ್ರಿ ದೇವರ ಲಲಿತೋದ್ಯಾನ ಉತ್ಸವ ನಡೆಯಲಿದೆ.
ಅಲ್ಲದೆ ಪ್ರತಿ ದಿನ ವಸ್ತುಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಸಾಂಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ.