×
Ad

ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಎಸಿಬಿ ಕ್ಲೀನ್‌ಚಿಟ್ ಪ್ರಕರಣಗಳ ಮರುತನಿಖೆ: ಯಡಿಯೂರಪ್ಪ

Update: 2017-11-12 23:26 IST

ಉಡುಪಿ, ನ.12: ರಾಜ್ಯದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿಯನ್ನು ಉಪಯೋಗಿಸಿ ಎಲ್ಲ ಲೂಟಿಗಳಿಂದ ಮುಕ್ತರಾಗಲು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಎಸಿಬಿಯಿಂದ ಕ್ಲೀನ್ ಚಿಟ್ ಪಡೆದುಕೊಂಡ ಎಲ್ಲ ಪ್ರಕರಣಗಳ ಮರುತನಿಖೆಗೆ ಆದೇಶ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿ ರವಿವಾರ ಹಮ್ಮಿಕೊಳ್ಳಲಾದ ಉಡುಪಿ ವಿಧಾನಸಭಾ ಕ್ಷೇತ್ರದ ಪರಿವರ್ತನಾ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗಣಪತಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಚಿವ ಕೆ.ಟಿ. ಜಾರ್ಜ್ ಅವರ ರಾಜೀನಾಮೆಯನ್ನು ಬೆಳಗಾವಿಯಲ್ಲಿ ನಡೆಯುವ ವಿಧಾನ ಸಭಾ ಅಧಿವೇಶನಕ್ಕೆ ಮೊದಲು ಪಡೆಯದಿದ್ದರೆ ಅಧಿವೇಶನದಲ್ಲಿ ಕಾರ್ಯಕಲಾಪ ನಡೆಯಲು ಬಿಡುವುದಿಲ್ಲ. ಆದುದರಿಂದ ಕೂಡಲೇ ಸಚಿವ ಜಾರ್ಜ್ ಅವರ ರಾಜೀನಾಮೆ ಪಡೆದುಕೊಳ್ಳಿ ಎಂದು ಅವರು ಹೇಳಿದರು.

ನಿಮ್ಮ ನಂಬಿಕೆ ವಿಶ್ವಾಸಕ್ಕೆಸ ದ್ರೋಹ ಮಾಡದೆ ಸ್ವಚ್ಛ, ಧಕ್ಷ, ಪ್ರಾಮಾಣಿಕ ಆಡಳಿತವನ್ನು ನೀಡುತ್ತೇನೆ ಎಂಬುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ. ಯಾವುದೇ ಭಿನ್ನಾಭಿ ಪ್ರಾಯ ಇಲ್ಲದೆ ನಾವೆಲ್ಲ ಒಟ್ಟಾಗಿ ಹೋಗುತ್ತೇವೆ. ಯಾರು ಅಭ್ಯರ್ಥಿ ಆಗಬೇಕೆಂದು ಸರ್ವೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಹೊರತು ಅಮಿತ್ ಶಾ, ಯಡಿಯೂರಪ್ಪ  ತೀರ್ಮಾನ ಮಾಡುವುದಿಲ್ಲ ಎಂದರು.

ಧರ್ಮಸ್ಥಳಕ್ಕೆ ಮೀನು, ಮಾಂಸ ತಿಂದು ಹೋದ ಸಿದ್ಧರಾಮಯ್ಯ ಉಡುಪಿಗೆ ನಾಲ್ಕೈದು ಬಾರಿ ಬಂದರೂ ಶ್ರೀಕೃಷ್ಣ ದೇವರ ದರ್ಶನ ಪಡೆಯದಿದ್ದದ್ದು ಒಳ್ಳೆಯ ದಾಯಿತು. ಇಲ್ಲದಿದ್ದರೆ ಶ್ರೀಕೃಷ್ಣ ದೇವಸ್ಥಾನವನ್ನು ಅಪವಿತ್ರಗೊಳಿಸುವ ಕಾರ್ಯ ವನ್ನು ಮಾಡುತ್ತಿದ್ದರು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮುಖಂಡರಾದ ಲಾಲಾಜಿ ಆರ್.ಮೆಂಡನ್, ಉದಯಕುಮಾರ್ ಶೆಟ್ಟಿ, ಶೀಲಾ ಕೆ.ಶೆಟ್ಟಿ, ದಿನಕರ ಬಾಬು, ಯಶ್ಪಾಲ್ ಸುವರ್ಣ, ಶ್ಯಾಮಲಾ ಕುಂದರ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯು ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. ಅವರ ಅಮ್ಮ ಬಿಜೆಪಿಗೆ ಬಂದಾಗಲೇ ಅವರು ಬರಬೇಕಾಗಿತ್ತು. ಆಗ ಬರದವರು ಈಗ ಬರುತ್ತಾರೆಯೇ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News