×
Ad

ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸಿದ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು

Update: 2017-11-12 23:41 IST

ಬ್ರಹ್ಮಾವರ, ನ.12: ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಎರಡನೇ ದಿನವೂ ನಿರೀಕ್ಷೆಯಂತೆ ಆಳ್ವಾಸ್ ನೇತೃತ್ವದ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಸಮಗ್ರ ಪ್ರಶಸ್ತಿ ಪಡೆಯುವತ್ತ ದಾಪುಗಾಲು ಹಾಕಿದ್ದಾರೆ.

ದಿನದಲ್ಲಿ ನಡೆದ 5ಕಿ.ಮೀ ನಡಿಗೆಯ ಬಾಲಕರ ವಿಬಾಗದಲ್ಲಿ ಮಂಡ್ಯದ ಚಂದನ್ ಗೌಡ ಎಚ್ ಪ್ರಥಮ, ಚಿಕ್ಕೋಡಿಯ ಲಕ್ಷ್ಮಣ ಕುಗಾತೋಲಿ ದ್ವಿತೀಯ ಮತ್ತು ಮೈಸೂರಿನ ಮದನ್ ಕುಮಾರ್ ಎಸ್ ಎಂ ತೃತೀಯ ಸ್ಥಾನ ಪಡೆದರೆ, ಬಾಲಕಿಯರ ವಿಬಾಗದ 3 ಕಿ.ಮೀ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ಹಿತಾಶ್ರೀ ಪ್ರಥಮ, ದಕ್ಷಿಣಕನ್ನಡದ ರಕ್ಷಿತಾ ದ್ವಿತೀಯ ಮತ್ತು ರಾಮನಗರದ ವಿನುತಾಶ್ರೀ ತೃತೀಯ ಸ್ಥಾನ ಪಡೆದರು.

 ಬಾಲಕರ ವಿಭಾಗದ ಲಾಂಗ್‌ಜಂಪನ್‌ನಲ್ಲಿ ಉಡುಪಿಯ ಸುನ್ನಿ ಅಂತೋನಿ ಡಿಸೋಜಾ ಪ್ರಥಮ, ಉತ್ತರ ಕನ್ನಡದ ಪ್ರಮೋದ್ ಅಂಬಿಗ ದ್ವಿತೀಯ ಮತ್ತು ದ.ಕ.ದ ಮಹಮ್ಮದ್ ಅಜ್ಮಲ್ ತೃತೀಯ ಸ್ಥಾನ ಪಡೆದರು. ಬಾಲಕರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ದ.ಕ.ದ ರಾಹುಲ್ ರಾಮ ತೋರಾಸೆ ಪ್ರಥಮ, ದ.ಕದ ಪ್ರವೀಣ್ ದ್ವಿತೀಯ ಹಾಗೂ ಬಳ್ಳಾರಿಯ ಕೆ.ವೈ ಯಶವಂತ್ ತೃತೀಯ ಸ್ಥಾನ ಪಡೆದಿದರು.

ಬಾಲಕರ ಪೋಲ್‌ವಾಲ್ಟ್‌ನಲ್ಲಿ ದ.ಕ.ದ ಮನ್ನತ್ ಎಚ್ ಗೌಡ ಪ್ರಥಮ, ದ.ಕದ ಭವಿತ್‌ ಕುಮಾರ್ ದ್ವಿತೀಯ ಮತ್ತು ಉಡುಪಿಯ ಪ್ರಹ್ಲಾದ್ ತೃತೀಯ ಸ್ಥಾನ ಗಳಿಸಿದರೆ, ಬಾಲಕಿಯರ ಪೋಲ್‌ವಾಲ್ಟ್‌ನಲ್ಲಿ ದ.ಕ.ದ ರಚನಾ ಆರ್ ಮತ್ತು ಸಿಂಧೂ ರಘುಪತಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಬಾಲಕಿಯರ ಶಾಟ್‌ಪುಟ್‌ನಲ್ಲಿ ಮೈಸೂರಿನ ಅಂಬಿಕಾ ವಿ ಪ್ರಥಮ, ದ.ಕ. ದ ಸಾಕ್ಷಿ ಕುಂದಾಪುರ ದ್ವಿತೀಯ ಹಾಗೂ ಉ.ಕದ ರಹಾತ್ ಸೈಯಿದ್ ತೃತೀಯ ಸ್ಥಾನ ಪಡೆದರು. ಬಾಲಕರ 110ಮೀ.ಹರ್ಡಲ್ಸ್‌ನಲ್ಲಿ ದ.ಕ.ದ ಶ್ರವಣ್ ಎಸ್ ಉಲ್ಲಾಳ್ ಪ್ರಥಮ, ದ.ಕ.ದ ದಯಾನಂದ್ ಜಾನ್ ಪಿ.ಜೆ ದ್ವಿತೀಯ ಮತ್ತು ಉಡುಪಿಯ ಸುಶಾಂತ್ ಎಂ.ಡಿ ತೃತೀಯ ಸ್ಥಾನ ಸಂಪಾದಿಸಿದರು.

ಬಾಲಕರ ವಿಭಾಗದ 3000ಮೀ.ಹರ್ಡಲ್ಸ್‌ನಲ್ಲಿ ದ.ಕ.ದ ಮಿಲನ್ ಎಂ.ಸಿ ಪ್ರಥಮ, ಬೆಳಗಾವಿಯ ಬಸಪ್ಪ ಮಲಂಗಿ ದ್ವಿತೀಯ ಹಾಗೂ ಮೈಸೂರಿನ ನೀಲೇಶ್ ತೃತೀಯ ಸ್ಥಾನ ಪಡೆದರು. ಬಾಲಕಿಯರ 3000ಮೀ.ಓಟದಲ್ಲಿ ಬೆಂಗಳೂರು ಉತ್ತರದ ಲಿಷಾ ಆರ್ ಪ್ರಥಮ, ಹರ್ಷಿತಾ ದ್ವಿತೀಯ ಮತ್ತು ಮೈಸೂರಿನ ಪಲ್ಲವಿ ಜಿ ಅಪ್ಪನಬಾಳ್ ತೃತೀಯ ಸ್ಥಾನ ಪಡೆದರು.

ಬಾಲಕರ 100 ರಿಲೇಯಲ್ಲಿ ಆತಿಥೇಯ ಉಡುಪಿ ಪ್ರಥಮ ಸ್ಥಾನವನ್ನು ಪಡೆದರೆ, ದ.ಕ. ದ್ವಿತೀಯ ಮತ್ತು ಬಳ್ಳಾರಿ ತೃತೀಯ ಸ್ಥಾನ ಪಡೆದವು.

ಎಂಟು ಹೊಸ ದಾಖಲೆ: ಎರಡನೇ ದಿನದ ಸ್ಪರ್ಧೆಗಳಲ್ಲಿ ಎಂಟು ಹೊಸ ದಾಖಲೆಗಳು ಮೂಡಿಬಂದವು. ಬಾಲಕರ 800ಮೀ. ಓಟದಲ್ಲಿ ದ.ಕ.ದ ರಕ್ಷಿತ್ ಆರ್ ಹೊಸ ದಾಖಲೆ ಬರೆದರೆ, 5000ಮೀ.ನಲ್ಲಿ ದ.ಕ.ದ ಕೆ.ಎನ್ ಸಕೀರಪ್ಪ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.ಬಾಲಕರ ಲಾಂಗ್‌ಜಂಪ್‌ನಲ್ಲಿ ದ.ಕ.ದ ಶಹನಾವಾಜ್ ಖಾನ್ ದಾಖಲೆ ಬರೆದರು.

ಬಾಲಕಿಯರ 100ಮೀ. ಓಟದಲ್ಲಿ ಬೆಂಗಳೂರು ದಕ್ಷಿಣದ ಧನೇಶ್ವರಿ 12.22ಸೆ.ಗಳಲ್ಲಿ ದೂರಕ್ರಮಿಸಿ ದಾಖಲೆ ಬರೆದರೆ, 400ಮೀ. ಹರ್ಡಲ್ಸ್‌ನಲ್ಲಿ ಉಡುಪಿಯ ಪ್ರಜ್ಞಾ ಕೆ., ಜಾವೆಲಿನ್ ಎಸೆತದಲ್ಲಿ ಉಡುಪಿಯ ಕರೀಶ್ಮಾ ಎಸ್.ಸಾನಿಲ್, ಶಾಟ್‌ಪುಟ್‌ನಲ್ಲಿ ಮೈಸೂರಿನ ಅಂಬಿಕಾ ವಿ.ಹಾಗೂ ಹೈಜಂಪ್‌ನಲ್ಲಿ ದ.ಕ.ದ ಎಸ್.ಪಿ.ಸುಪ್ರೀಯಾ ನೂತನ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News