108 ಆ್ಯಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಬಂಟ್ವಾಳ, ನ. 13: ಬೆಳ್ತಂಗಡಿ ತಾಲೂಕಿನ ಗರ್ಭಿಣಿಯೊಬ್ಬರು 108 ಆ್ಯಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬಿ.ಸಿ.ರೋಡ್ ಸಮೀಪದ ಕಳ್ಳಿಮಾರಿನ ಬಂಟ್ವಾಳ ವಲಯ ಅರಣ್ಯ ಕಚೇರಿ ಮುಂಭಾಗ ಸೋಮವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸುದೆಮುಗೇರು ನಿವಾಸಿ ಕೃಷ್ಣ ಅವರ ಪತ್ನಿ ನೀಲಾ ಅವರು 108 ಆ್ಯಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ.
ಬೆಳ್ತಂಗಡಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆ ದಾಖಲಾಗಿದ್ದರು. ಆದರೆ ಅವರ ಹೆರಿಗೆ ಕಷ್ಟ ಸಾಧ್ಯ ಎಂದು ವೈದ್ಯರ ಸೂಚನೆಯಂತೆ ನೀಲಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು 108 ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ ಬಂಟ್ವಾಳ ಕಳ್ಳಿಮಾರು ಸಮೀಪ ಬರುತ್ತಿದಂತೆ ನೀಲಾ ಅವರಿಗೆ ಹೆರಿಗೆ ನೋವು ಜಾಸ್ತಿಯಾಗಿತ್ತು. ತಕ್ಷಣ ಆ್ಯಂಬುಲೆನ್ಸ್ ಅನ್ನು ಅಲ್ಲಿಯೇ ನಿಲ್ಲಿಸಿ ವಾಹನದಲ್ಲಿದ ಆರೋಗ್ಯ ಸಹಾಯಕಿ ಕೋಮಲ ಅವರು ನೀಲಾ ಅವರ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ವಾಹನ ಚಾಲಕ ಜಗನ್ನಾಥ ಶೆಟ್ಟಿ ಅವರು ಸಹಕಾರ ಮಾಡಿದರು. ತಾಯಿ -ಮಗು ಆರೋಗ್ಯವಾಗಿದ್ದು, ಬಳಿಕ ಮಂಗಳೂರು ಆಸ್ಷತ್ರೆಗೆ ಸೇರಿಸಲಾಯಿತು.