ನ.16: ಕೊಂಕಣಿ ಮಾನ್ಯತಾ ರಜತ ವರ್ಷಾಚರಣೆ ಸಂಭ್ರಮ
ಮಂಗಳೂರು, ನ.13: ರಾಜ್ಯ ಸರಕಾರವು ಕೊಂಕಣಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಆಕಾಡಮಿಯು ಮಾನ್ಯತಾ ರಜತ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. 25 ಕಡೆ 25 ವೈವಿಧ್ಯ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಈಗಾಗಲೆ 7 ಕಾರ್ಯಕ್ರವಗಳನ್ನು ನಡೆಸಿದೆ. 8ನೆ ಕಾರ್ಯಕ್ರಮವನ್ನು ಕೊಂಕಣಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನಾಗಿ ನ.16 ರಂದು ಮಂಗಳೂರಿನಲ್ಲಿ ನಡೆಸಲಾಗುವುದು ಎಂದು ಅಕಾಡಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಜೋಕಿಮ್ ಸ್ಟಾನಿ ಆಲ್ವಾರಿಸ್ ತಿಳಿಸಿದ್ದಾರೆ.
ಅಕಾಡಮಿಯ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.16ರಂದು ನಗರದ ಪುರಭವನದಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳ ಕೊಂಕಣಿ ಮಕ್ಕಳ ದಿನಾಚರಣೆಯ ಸಹಿತ ದಿನ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಅಂದು ಬೆಳಗ್ಗೆ 9ಕ್ಕೆ ಮೇಯರ್ ಕವಿತಾ ಸನಿಲ್ ಕಾರ್ಯಕ್ರಮ ಉದ್ಘಾಟಿಸುವರು.ಅಕಾಡಮಿಯ ಅಧ್ಯಕ್ಷ ಆರ್.ಪಿ.ನಾಯ್ಕ ಅಧ್ಯಕ್ಷತೆ ವಹಿಸುವರು. ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಆಯ್ದ ಶಾಲಾ, ಕಾಲೇಜು ಕಲಾ ತಂಡಗಳಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ ನಾಟಕ, ರೂಪಕ, ಸಮೂಹಗಾಯನ, ಜನಪದ ನೃತ್ಯ/ಆಚರಣೆ, ಭಾಷಣ, ಏಕಪಾತ್ರಾಬಿನಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂಜೆ 5ಕ್ಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಕೊಂಕಣಿ ಮಾನ್ಯತಾ ರಜತ ವರ್ಷಾಚರಣೆ ಬಗ್ಗೆ ಸಭಾ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಯು.ಟಿ ಖಾದರ್, ಶಾಸಕರಾದ ಜೆ.ಆರ್.ಲೋಬೊ, ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ, ಮೊಯ್ದಿನ್ ಬಾವಾ, ಐವನ್ ಡಿಸೋಜ, ದ.ಕ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಹಾಗೂ ತುಳು ಅಕಾಡಮಿಯ ಅಧ್ಯಕ್ಷ ಎ.ಸಿ ಭಂಡಾರಿ ಹಾಗೂ ಅಕಾಡಮಿಯ ಮಾಜಿ ಅಧ್ಯಕ್ಷರಾದ ಬಸ್ತಿವಾಮನ್ ಶೆಣೈ, ಎರಿಕ್ ಒಝಾರಿಯೊ, ಕುಂದಾಪುರ ನಾರಾಯನ ಖಾರ್ವಿ, ಕಾಸರಗೋಡು ಚಿನ್ನಾ, ರಾಯ್ ಕ್ಯಾಸ್ತೆಲಿನೊ ಅತಿಥಿಗಳಾಗಿ ಭಾಗವಹಿಸುವರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಸದಸ್ಯ ಲಕ್ಷ್ಮಣ್ ಪ್ರಭು, ಮಾಜಿ ಸದಸ್ಯ ಲಾರೆನ್ಸ್ ಡಿಸೋಜ, ರಿಜಿಸ್ಟ್ರಾರ್ ಬಿ. ದೇವದಾಸ್ ಪೈ ಉಪಸ್ಥಿತರಿದ್ದರು.