×
Ad

ತುಳು ಚಲನಚಿತ್ರೋತ್ಸವಕ್ಕೆ ಸಿದ್ಧತೆ: ರಾಜೇಶ್ ಬ್ರಹ್ಮಾವರ್

Update: 2017-11-13 19:12 IST

ಮಂಗಳೂರು, ನ.13: ತುಳು ಚಲನಚಿತ್ರರಂಗ ಬೆಳೆಯುತ್ತಿರುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ತುಳು ಚಲನಚಿತ್ರೋತ್ಸವವನ್ನು ನಡೆಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತುಳು ನಿರ್ಮಾಪಕರ ಸಂಘದ ಅದ್ಯಕ್ಷ ರಾಜೇಶ್ ಬ್ರಹ್ಮಾವರ್ ಹೇಳಿದರು.

ತುಳು ಚಲನಚಿತ್ರೋತ್ಸವ ಆಚರಣೆಯ ಅಂಗವಾಗಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞ, ಕಲಾವಿದರ ಸಲಹೆ ಸೂಚನೆಗಳನ್ನು ಸ್ವೀಕರಿಸಲು ನಗರದ ಸುಮಸಧನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

7 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ 28 ಪ್ರದರ್ಶನ ನಡೆಯಲಿದೆ. ತುಳು ಮತ್ತು ಕೊಂಕಣಿ ಭಾಷೆಯ ಚಲನಚಿತ್ರಕ್ಕೆ ಮಾನ್ಯತೆ ನೀಡಲಾಗುವುದು. ತುಳು ನಿರ್ಮಾಪಕರ ಸಂಘದ ವತಿಯಿಂದ 22 ಲಕ್ಷ ರೂ. ವೆಚ್ಚದಲ್ಲಿ ಸಮಾರಂಭ ನಡೆಸಲು ತೀರ್ಮಾನಿಸಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಹಿತ ರಾಜ್ಯ ಸರಕಾರದ ಅನುದಾನಕ್ಕೆ ಸಂಪರ್ಕಿಸಲಾಗುತ್ತಿದೆ. ಈಗಾಗಲೇ ಸಿನಿಪೊಲೀಸ್‌ನ ಒಂದು ಪರದೆಯನ್ನು ಚಿತ್ರೋತ್ಸವಕ್ಕೆ ನೀಡಲು ಮಾಲಕರು ಒಪ್ಪಿದ್ದಾರೆ ಎಂದರು.

ತುಳು ಚಲನಚಿತ್ರವು ಚಿತ್ರಮಂದಿರದ ಕೊರತೆಯ ಸಮಸ್ಯೆ ಎದುರಿಸುತ್ತಿವೆ. ಉಳಿದ ಭಾಷೆಗೆ ಹೋಲಿಸಿದರೆ ತುಳು ಚಲನಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರದ ಬಾಡಿಗೆ ದರ ಹೆಚ್ಚಾಗುತ್ತಿದೆ. ಈ ರೀತಿಯ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲು ತುಳು ಚಲನಚಿತ್ರೋತ್ಸವ ಉಪಕಾರಿಯಾಗಲಿದೆ. ಚಿತ್ರೋತ್ಸವಕ್ಕೆ ಕನ್ನಡ, ತಮಿಳು, ಮಲೆಯಾಳ ಚಲನಚಿತ್ರದ ತಂತ್ರಜ್ಞರನ್ನು ಆಹ್ವಾನಿಸಲಾಗುವುದು ಎಂದು ರಾಜೇಶ್ ಬ್ರಹ್ಮಾವರ್ ತಿಳಿಸಿದರು.

ನಿರ್ದೇಶಕ, ನಟ ದೇವದಾಸ ಕಾಪಿಕಾಡ್, ಸಂಘದ ಕಾರ್ಯದರ್ಶಿ ಸಚಿನ್ ಉಪ್ಪಿನಂಗಡಿ, ಕಿಶೋರ್ ಕೊಟ್ಟಾರಿ, ಚಂದ್ರಹಾಸ ಸುವರ್ಣ, ಪ್ರೀತಂ ಸಾಗರ್, ಪಮ್ಮಿ ಕೊಡಿಯಾಲ್‌ಬೈಲ್, ಅಶ್ವಿತ್ ಕೊಟ್ಟಾರಿ, ಶ್ರವಣ್ ಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News