ಸರ್ಕಾರಿ ಬಸ್‌ಗೆ ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಹಕ್ಕೊತ್ತಾಯ ಸಮಾವೇಶ
ಕೊಣಾಜೆ, ನ. 13: ಸರ್ಕಾರ ಜನರ ಬೇಡಿಕೆಗೆ ಅನುಸಾರವಾಗಿ ಗ್ರಾಮೀಣ ಭಾಗಕ್ಕೂ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಆದರೆ ಬಿಎಂಟಿಸಿಯನ್ನೇ ಖಾಸಗಿ ನಿಯಂತ್ರಣಕ್ಕೆ ನೀಡಲು ಮುಂದಾಗಿರುವುದು ದುರಂತ. ಇಂತಹ ತೀರ್ಮಾನದಿಂದ ಸಾರಿಗೆ ವ್ಯವಸ್ಥೆ ಖಾಸಗಿ ಕೈಗೆ ಕೊಟ್ಟಂತ್ತಾಗುತ್ತದೆ. ಇದರ ವಿರುದ್ಧ ಜನಜಾಗೃತಿ ಮೂಡಬೇಕಿದ್ದು, ಡಿವೈಎಫ್‌ಐ ಹೋರಾಟ ತೀವ್ರಗೊಳಿಸಲಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾರ್ ಹೇಳಿದರು.
ಅವರು ಮಂಗಳೂರಿನಿಂದ ಮೊಂಟೆಪದವು ಮಾರ್ಗವಾಗಿ ಮುಡಿಪುವರಗೆ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಸೋಮವಾರ ಡಿವೈಎಫ್‌ಐ ವತಿಯಿಂದ ತೌಡುಗೋಳಿ ಅಡ್ಡರಸ್ತೆಯಲ್ಲಿ ಹಕ್ಕುತ್ತಾಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರ್ಕಾರಿ ಬಸ್ಸುಗಳಿಗೆ ಅನುಮತಿಯಿದ್ದರೂ ಖಾಸಗಿ ಲಾಭಿಯಿಂದಾಗಿ ಸಂಚಾರ ಆರಂಭಗೊಂಡಿಲ್ಲ. ಇದರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಶಾಲಾ ಮಕ್ಕಳೂ ಭಾಗವಹಿಸುವುದನ್ನುನ ಗಮನಿಸುವಾಗ ಖಾಸಗಿ ಬಸ್ಸುಗಳಲ್ಲಿ ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಿಳಿಯಬಹುದು. ಸರ್ಕಾರಿ ಬಸ್ ಶೀಘ್ರ ಆರಂಭಗೊಳ್ಳದಿದ್ದಲ್ಲಿ ರಸ್ತೆ ತಡೆದು, ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರನ್ನು ಲೆಕ್ಕಕ್ಕಿಂತ ಹೆಚ್ಚು ಸಾಗಿಸುವುದು ಅಕ್ರಮವಾಗಿದೆ, ಆದರೂ ಈ ಬಗ್ಗೆ ಯಾವುದೇ ಸಂಘಟನೆ ಧ್ವನಿ ಎತ್ತಿಲ್ಲ, ಡಿವೈಎಫ್‌ಐ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದರು.
ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಸಾಮಾಜಿಕ ಕಾರ್ಯಕರ್ತರಾದ ಆಲಿಕುಂಞಿ ಮೋಂಟುಗೋಳಿ, ಆನಂದ, ಮೊಂಟೆಪದವು ಘಟಕ ಕಾರ್ಯದರ್ಶಿ ಮುನೀರ್, ಮುಖಂಡರಾದ ಹನೀಫ್, ನೌಶೀಫ್, ಇರ್ಷಾದ್ ಪಡಿಕ್ಕಲ್, ಇಸ್ಮಾಯಿಲ್, ಕರವೇ ಮುಡಿಪು ಘಟಕಾಧ್ಯಕ್ಷ ಜಲೀಲ್ ಮುಡಿಪು ಇನ್ನಿತರರು ಉಪಸ್ಥಿತರಿದ್ದರು.
ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು ಸ್ವಾಗತಿಸಿದರು.