ದಕ್ಷಿಣ ಚೀನಾ ಸಮುದ್ರದ ಶಾಂತಿಯನ್ನು ಖಾಯಂ ಎಂದು ಪರಿಗಣಿಸಲಾಗದು

Update: 2017-11-13 15:54 GMT

ಮನಿಲಾ (ಫಿಲಿಪ್ಪೀನ್ಸ್), ನ. 13: ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ವಿವಾದದಲ್ಲಿ ಈಗ ನೆಲೆಸಿರುವ ಶಾಂತಿಯನ್ನು ಖಾಯಂ ಎಂಬುದಾಗಿ ಆಗ್ನೇಯ ಏಶ್ಯ ದೇಶಗಳು ಪರಿಗಣಿಸುವುದಿಲ್ಲ ಎಂದು ಇಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗ ಸಮ್ಮೇಳನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾದ ಜಂಟಿ ಹೇಳಿಕೆ ತಿಳಿಸಿದೆ.

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ 10 ಆಸಿಯಾನ್ ದೇಶಗಳು ಮತ್ತು ಚೀನಾ ನಡುವೆ ಸಭೆ ನಡೆದ ಬಳಿಕ ಈ ಹೇಳಿಕೆಯನ್ನು ಹೊರಡಿಸಲಾಯಿತು.

‘‘ಈಗ ಪರಿಸ್ಥಿತಿ ಶಾಂತವಾಗಿದೆಯಾದರೂ, ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ನಾವು ಭಾವಿಸುವಂತಿಲ್ಲ’’ ಎಂದು ಹೇಳಿಕೆ ತಿಳಿಸಿದೆ.

‘‘ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಹಾಗೂ ನೌಕಾಯಾನ ಮತ್ತು ವಿಮಾನ ಹಾರಾಟ ಸ್ವಾತಂತ್ರ ಹೊಂದಲು ನಮ್ಮ ನಡುವೆ ಸಹಕಾರ ಇರಬೇಕಾದುದು ಅಗತ್ಯ. ಉದ್ವಿಗ್ನತೆಗೆ ಕಾರಣವಾಗುವ ತಪ್ಪು ಲೆಕ್ಕಾಚಾರಗಳನ್ನು ನಿವಾರಿಸುವುದು ನಮ್ಮೆಲ್ಲರ ಹಿತಾಸಕ್ತಿಯಿಂದ ಅಗತ್ಯವಾಗಿದೆ’’ ಎಂದಿದೆ.

ಆಸಿಯಾನ್ ವಾರ್ಷಿಕ ಸಮ್ಮೇಳನದಲ್ಲಿ ಸದಸ್ಯ ದೇಶಗಳನ್ನು ಹೊರತುಪಡಿಸಿ, ಚೀನಾ, ಅಮೆರಿಕ, ಭಾರತ ಮತ್ತು ಇತರ ಆರು ದೇಶಗಳು ಭಾಗವಹಿಸಿವೆ.

ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಮೋದಿದ ಭೇಟಿ

 ಪ್ರಧಾನಿ ನರೇಂದ್ರ ಮೋದಿ ಸೋಮವಾರ ಫಿಲಿಪ್ಪೀನ್ಸ್‌ನಲ್ಲಿರುವ ಜಾಗತಿಕ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು.

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಲಾಸ್ ಬಾನೊಸ್ ನಗರದಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್‌ಆರ್‌ಐ) ಇದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

ಜಾಗತಿಕ ಆಹಾರ ಕೊರತೆಯನ್ನು ನಿಭಾಯಿಸಲು ಅಗತ್ಯವಾದ ಉತ್ತಮ ಗುಣಮಟ್ಟದ ಅಕ್ಕಿ ತಳಿಗಳನ್ನು ಈ ಸಂಸ್ಥೆಯಲ್ಲಿ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ.

 ಪ್ರವಾಹ ತಡೆಯುವ ಅಕ್ಕಿ ತಳಿಗಳ ಬಗ್ಗೆ ವಿಜ್ಞಾನಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಪ್ರವಾಹಪೀಡಿತ ಪ್ರದೇಶಗಳಲ್ಲಿ 14-18 ದಿನಗಳ ಕಾಲ ಭತ್ತವು ಪ್ರವಾಹದಿಂದ ಆವೃತವಾಗಿದ್ದರೂ ಹೆಕ್ಟೇರ್‌ಗೆ 1ರಿಂದ 3 ಟನ್ ಹೆಚ್ಚುವರಿ ಫಸಲನ್ನು ನೀಡುತ್ತದೆ ಎಂದು ವಿಜ್ಞಾನಿಗಳು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News