ಸೂಕಿ ಜೊತೆಗೆ ಪಡೆದ ಪ್ರಶಸ್ತಿ ಹಿಂದಿರುಗಿಸಲು ನಿರ್ಧರಿಸಿದ ಡಬ್ಲಿನ್ ಹಾಡುಗಾರ

Update: 2017-11-13 16:01 GMT

ಡಬ್ಲಿನ್ (ಐರ್‌ಲ್ಯಾಂಡ್), ನ. 13: ಐರ್‌ಲ್ಯಾಂಡ್‌ನ ಹಾಡುಗಾರ ಹಾಗೂ ಬಡತನ ನಿಗ್ರಹ ಹೋರಾಟಗಾರ ಬಾಬ್ ಜೆಲ್ಡಾಫ್ ತನ್ನ ‘ಫ್ರೀಡಂ ಆಫ್ ದ ಸಿಟಿ ಆಫ್ ಡಬ್ಲಿನ್’ ಪ್ರಶಸ್ತಿಯನ್ನು ತವರು ನಗರ ಡಬ್ಲಿನ್‌ಗೆ ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಜೊತೆಗೆ ಈ ಗೌರವವನ್ನು ಹಂಚಿಕೊಳ್ಳಲು ತನ್ನಿಂದ ಸಾಧ್ಯವಾಗದು ಎಂದು ಅವರು ತನ್ನ ಈ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ.

  ಸೂ ಕಿಯ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ಮತ್ತು ಬಹುಸಂಖ್ಯಾತ ಬೌದ್ಧರು ನಡೆಸುತ್ತಿರುವ ಹಿಂಸಾಚಾರಕ್ಕೆ ಬೆದರಿ ಆಗಸ್ಟ್ 25ರ ಬಳಿಕ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ. ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿದೆ.

‘‘ನಾನೋರ್ವ ಹೆಮ್ಮೆಯ ಡಬ್ಲಿನಿಗ. ಈ ಪ್ರಶಸ್ತಿಯೂ ಶ್ರೇಷ್ಠವಾಗಿದೆ. ಆದರೆ, ಪ್ರಶಸ್ತಿ ಪಡೆದವರ ಸಾಲಿನಲ್ಲಿ ಸೂ ಕಿ ಇರುವವರೆಗೆ ನಾನು ಪಡೆದ ಪ್ರಶಸ್ತಿ ಬಗ್ಗೆ ಹೆಮ್ಮೆ ಪಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ’’ ಎಂದು ಜೆಲ್ಡಾಫ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News