ನಕಲಿ ದಾಖಲೆ ಸೃಷ್ಠಿಸಿ ಮೋಸ ಪ್ರಕರಣ: ಶಿಕ್ಷೆ
ಉಡುಪಿ, ನ.13: ತಾಯಿಯ ಆಸ್ತಿಯಲ್ಲಿ ಪಾಲು ನೀಡದೆ ನಕಲಿ ದಾಖಲೆ ಗಳನ್ನು ಸೃಷ್ಠಿಸಿ ನಿವೃತ್ತ ಯೋಧನಿಗೆ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಹೋದರಿ ಹಾಗೂ ಅವರ ಆರು ಮಕ್ಕಳಿಗೆ ಉಡುಪಿ ನ್ಯಾಯಾಲಯ ಶಿಕ್ಷೆ ವಿಧಿಸಿ ನ.10ರಂದು ತೀರ್ಪು ನೀಡಿದೆ.
ಮಲ್ಲಾರು ಗುಜ್ಜಿಮನೆಯ ನಿವೃತ್ತ ಯೋಧ ನಿತ್ಯಾನಂದ ಶೆಟ್ಟಿ (60) ಎಂಬವರಿಗೆ ಅವರ ಸಹೋದರಿ ಜಲಜ ಶೆಟ್ಟಿ ಹಾಗೂ ಮಕ್ಕಳಾದ ಸತೀಶ ಶೆಟ್ಟಿ, ಯಶೋಧ ಶೆಟ್ಟಿ, ಶಕುಂತಲಾ ಶೆಟ್ಟಿ, ನಳಿನಿ ಶೆಟ್ಟಿ ಮತ್ತು ಕುಶಲ ಶೆಟ್ಟಿ ಎಂಬವರು ತಾಯಿಯ ಆಸ್ತಿಯಲ್ಲಿ ಪಾಲು ಕೊಡದೆ 2002ರ ಫೆ.8ರಂದು ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ವಿಭಾಗ ಪತ್ರ ಸೃಷ್ಟಿಸಿ ನಿತ್ಯಾನಂದ ಶೆಟ್ಟಿಯವರ ಸಹಿಯನ್ನು ಪೋರ್ಜರಿ ಮಾಡಿ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖ ಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಆಗಿನ ಸಬ್ ಇನ್ಸ್‌ಪೆಕ್ಟರ್ ಬಿ.ಎಸ್. ಪ್ರಕಾಶ್ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಸಾಕ್ಷಿ ವಿಚಾರಣೆ ನಡೆಯುತ್ತಿರುವಾಗ ಆರೋಪಿ ಜಲಜ ಶೆಟ್ಟಿ ಹಾಗೂ ಪಿರ್ಯಾದಿ ನಿತ್ಯಾನಂದ ಶೆಟ್ಟಿ ಮೃತ ಪಟ್ಟಿದ್ದಾರೆ. ಉಡುಪಿ ಹೆಚ್ಚುವರಿ ಜೆ.ಎಂ.ಎಪ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಪ್ರಕರಣ ದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ತೀರ್ಮಾನಿಸಿ ಭಾ.ದಂ.ಸಂ ಕಲಂ 465, 467, 468, 471, ಜೊತೆಗೆ 34ರಡಿ 3 ವರ್ಷ ಸಾದಾ ಸಜೆ ಮತ್ತು 6000 ರೂ. ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.