‘ಬೆಳಗಾವಿ ಚಲೋ’ಗೆ ದ.ಕ. ಜಿಲ್ಲೆಯಿಂದ 800ಕ್ಕೂ ಅಧಿಕ ವೈದ್ಯರು
ಮಂಗಳೂರು, ನ. 13: ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ರಾಜ್ಯ ಶಾಖೆಯು ಹಮ್ಮಿಕೊಂಡಿರುವ ‘ಬೆಳಗಾವಿ ಚಲೋ’ ಕಾರ್ಯಕ್ರಮಕ್ಕೆ ದ.ಕ. ಜಿಲ್ಲೆಯಿಂದ 800ಕ್ಕೂ ಅಧಿಕ ಖಾಸಗಿ ಆಸ್ಪತ್ರೆ ವೈದ್ಯರು ತೆರಳಿರುವುದರಿಂದ ಜಿಲ್ಲೆಯಲ್ಲಿ ಆರೋಗ್ಯ ಸೇವೆಯಲ್ಲಿ ತೊಂದರೆ ಉಂಟಾಗಿದೆ.
ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿರುವುದರಿಂದ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ರಾಜ್ಯ ಶಾಖೆಯು ಬೆಳಗಾವಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯರು ಲಭ್ಯ ಇಲ್ಲದಿದ್ದುದರಿಂದ ಕೆಲವು ಆಸ್ಪತ್ರೆಗಳಲ್ಲಿನ ಹೊರರೋಗಿ ವಿಭಾಗಗಳು ಮುಚ್ಚಿದ್ದವು. ಆದರೆ ತೀವ್ರ ನಿಗಾ ಘಟಕ ಸೇರಿದಂತೆ ತುರ್ತು ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ.
ಐಎಂಎ ವತಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ವೈದ್ಯರನ್ನು ನೇಮಕ ಮಾಡಲಾಗಿತ್ತು. ಉಳಿದೆಲ್ಲ ವಿಭಾಗಗಳು ಬಂದ್ ಆಗಿದ್ದವು. ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ಆಗಮಿಸಿದ ರೋಗಿಗಳು ಕೊನೆಗೆ ವಿಷಯ ಅರಿತು ಸರಕಾರಿ ಆಸ್ಪತ್ರೆಗಳಿಗೆ ತೆರಳುವಂತಾಯಿತು. ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದ್ದವು.