×
Ad

​ಪುತ್ತೂರಿನಲ್ಲಿ ನ.17ರಿಂದ ಚಲನಚಿತ್ರ ಸಪ್ತಾಹ

Update: 2017-11-13 22:39 IST

ಮಂಗಳೂರು, ನ. 13: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನದ ಅಂಗವಾಗಿ ಚಲನಚಿತ್ರ ಸಪ್ತಾಹವನ್ನು ನ.17ರಿಂದ 23 ರವರೆಗೆ ಪ್ರತೀ ದಿನ ಬೆಳಗ್ಗೆ 9ಗಂಟೆಗೆ ಪುತ್ತೂರಿನ ಅರುಣ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದೆ.

ಚಲನಚಿತ್ರ ಸಪ್ತಾಹದಲ್ಲಿ ನ.17ರಂದು ರಾಜ್ಯ ಪ್ರಶಸ್ತಿ ಜೇತ ಚಿತ್ರ ‘ಅಮರಾವತಿ’, ನ.18 ರಂದು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ‘ಕಿರಿಕ್ ಪಾರ್ಟಿ’, ನ. 19 ರಂದು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ‘ರಾಮ ರಾಮ ರೇ’, 20ರಂದು ರಾಜ್ಯ ಪ್ರಶಸ್ತಿ ವಿಜೇತ ತುಳು ಚಲನಚಿತ್ರ ‘ಮದಿಪು’, 21ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಲನಚಿತ್ರ ‘ಯೂಟರ್ನ್’, 22 ರಂದು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ‘ಅಲ್ಲಮ’, 23ರಂದು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ, ‘ಮಾರಿಕೊಂಡವರು’ ಪ್ರದರ್ಶನಗೊಳ್ಳಲಿದೆ.

ಚಲನಚಿತ್ರ ಸಪ್ತಾಹವನ್ನು ನ.17 ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್ ಉದ್ಘಾಟಿಸುವರು. ಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಮಂಗಳೂರು, ನ. 13: ಸಮಾಜ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ 2017-18ನೆ ಸಾಲಿನಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಸಮಾಜ ಸೇವೆ ಕ್ಷೇತ್ರದಲ್ಲಿ ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ, ಆಯ್ಕೆಯಾದ ಪ್ರತಿ ಮಗುವಿಗೆ ತಲಾ 10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.

ಅರ್ಜಿ ಸಲ್ಲಿಸುವ ಮಕ್ಕಳ ವಯಸ್ಸು 5 ರಿಂದ 18 ವರ್ಷದೊಳಗಿರಬೇಕು. ಜನನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟಿರಬೇಕು. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಪುನಃ ಪ್ರಶಸ್ತಿ ನೀಡಲು ಅವಕಾಶವಿರುವುದಿಲ್ಲ.ಸಮಾಜ ಸೇವೆಯ ಪ್ರಶಸ್ತಿಗೆ ಆಯ್ಕೆ ಮಾಡುವಂತಹ ಮಕ್ಕಳು ಸಮಾಜ ಸೇವೆಯಲ್ಲಿ ಅಪ್ರತಿಮ ಮಾಡಿರತಕ್ಕದ್ದು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸಬೇಕು.

ಪ್ರಸ್ತಾವನೆಯನ್ನು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್ ಅಶೋಕ ನಗರ, ಮಂಗಳೂರು- ಇವರಿಗೆ ನ.25ರೊಳಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451254, 2453071ನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News