ಸಹಕಾರ ಸಂಸ್ಥೆ, ಸಹಕಾರಿಗಳಿಗೆ ಪುರಸ್ಕಾರ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು, ನ. 13: ನಗರದ ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿ ನ. 15ರಂದು ನಡೆಯಲಿರುವ 64ನೆ ಅಖಿಲ ಭಾರತ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಹಕಾರ ಸಂಸ್ಥೆಗಳಿಗೆ ಮತ್ತು ಉತ್ತಮ ಸಹಕಾರಿಗಳಿಗೆ ಪುರಸ್ಕಾರ ನಡೆಯಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಿಂದ 8 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, 8 ಹಾಲು ಉತ್ಪಾದಕರ ಸಹಕಾರಿ ಸಂಘಗಳು, 2 ಪತ್ತಿನ ಸಹಕಾರಿ ಸಂಘಗಳು, 2 ಪಟ್ಟಣ ಸಹಕಾರಿ ಸಂಘಗಳು, 2 ಟಿ.ಎ.ಪಿ.ಸಿ.ಎಂ.ಎಸ್.ಗಳು, 2 ಪಿಕಾರ್ಡ್ ಬ್ಯಾಂಕುಗಳು, 2 ಮೀನುಗಾರಿಕಾ ಸಹಕಾರಿ ಸಂಘಗಳು, 2 ಮಹಿಳಾ ಸಹಕಾರಿ ಸಂಘಗಳು, 2 ಲ್ಯಾಂಪ್ಸ್ ಸಂಸೈಟಿಗಳು, 2 ವಿವಿಧೋದ್ದೇಶ ಸಹಕಾರಿ ಸಂಘಗಳು ಹಾಗೂ 2 ಇತರ ಸಹಕಾರಿ ಸಂಘಗಳನ್ನು ಗುರುತಿಸಿ ಅಭಿನಂದಿಸಲಾಗುವುದು ಎಂದರು.
ಅಲ್ಲದೆ, ಸಹಕಾರಿ ಚಳುವಳಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಉಭಯ ಜಿಲ್ಲೆಗಳ ತಾಲೂಕಿಗೆ ಒಬ್ಬರಂತೆ ಹಾಗೂ ಉಭಯ ಜಿಲ್ಲೆಗಳಿಂದ ಒಬ್ಬ ಮಹಿಳೆಯನ್ನು ವಿಶೇಷವಾಗಿ ಆಯ್ಕೆ ಮಾಡಿ ಅಭಿನಂದಿಸಲಾಗುವುದು ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದರು.
ನ.15ರಂದು ನೆಹರೂ ಮೈದಾನದ ಫುಟ್‌ಬಾಲ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುನ್ನ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಆವರಣದಿಂದ ಫುಟ್‌ಬಾಲ್ ಮೈದಾನದವರೆಗೆ ಜಾಥಾ ಹೊರಡಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ರಮೇಶ್‌ಲ. ಜಾರಕಿಹೊಳಿ ಅವರು ಸಹಕಾರ ಸಪ್ತಾಹದ ಉದ್ಘಾಟನೆ ಮತ್ತು ನಂದಿನಿ ಉತ್ಪನ್ನಗಳ ಬಿಡುಗಡೆಯನ್ನು ನೆರವೇರಿಸಲಿದ್ದಾರೆ.
ವಿವಿಧ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಟ್ಯಾಬ್ಲೊಗಳು ಜಾಥಾದಲ್ಲಿ ಭಾಗವಹಿಸಲಿವೆ. 12,000ಕ್ಕೂ ಮಿಕ್ಕಿ ಸಹಕಾರಿಗಳು, ನವೋದಯ ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಸತೀಶ್ ಎಸ್., ದ.ಕ. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹರೀಶ್ ಆಚಾರ್ ಉಪಸ್ಥಿತರಿದ್ದರು.