ಬಾಕಿ ಬಿಲ್ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತ: ಮನಪಾ ಮೇಯರ್

Update: 2017-11-14 10:16 GMT

ಮಂಗಳೂರು, ನ. 14: ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಪಾವತಿಗೆ ಬಾಕಿ ಇರುವವರು ಪಾವತಿಸುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಆರಂಭಿಸಲಾಗಿದ್ದು, ಇನ್ನೂ ಪಾವತಿಗೆ ಬಾಕಿ ಇರಿಸಿಕೊಂಡಿರುವವರು ತಕ್ಷಣ ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಂಪರ್ಕ ಕಡಿತ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಅಕ್ರಮ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನಪಾದ ಗಮನಕ್ಕೆ ಬಂದ 38 ಸಂಪರ್ಕಗಳನ್ನು ಈಗಾಗಲೇ ಕಡಿತಗೊಳಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ ಬಾಕಿ ಪಾವತಿಗೆ ಸಂಬಂಧಿಸಿ ನಡೆಸಲಾದ ಅಭಿಯಾನದಿಂದಾಗಿ ಸಾರ್ವಜನಿಕರೇ ಖುದ್ದಾಗಿ ಬಿಲ್ ಪಾವತಿಸುವ ಮೂಲಕ 3.20 ಕೋಟಿ ರೂ. ಸಂಗ್ರಹವಾಗಿದೆ. ಅಧಿಕಾರಿಗಳು ಸ್ಥಳಗಳಿಗೆ ತೆರಳಿ 13 ಲಕ್ಷ ರೂ. ಬಾಕಿ ಸಂಗ್ರಹ ಮಾಡಿದ್ದಾರೆ ಎಂದು ಮೇಯರ್ ತಿಳಿಸಿದರು.

ನಗರದಲ್ಲಿ ಒಟ್ಟು 87,773 ನೀರಿನ ಸಂಪರ್ಕಗಳಿವೆ. ಇವುಗಳಲ್ಲಿ 80,612 ಗೃಹೋಪಯೋಗಿ ಬಳಕೆಯ ಸಂಪರ್ಕಗಳಾಗಿವೆ. 4,869 ಸಂಪರ್ಕಗಳು ಅಂಗಡಿಗಳದ್ದಾಗಿದ್ದು, 1,033 ವಾಣಿಜ್ಯ ಉಪಯೋಗದ ಸಂಪರ್ಕಗಳು, 1,251 ಸಂಪರ್ಕಗಳು ಕಟ್ಟಡ ರಚನೆಯದ್ದಾಗಿವೆ. ಪ್ರಸ್ತುತ ಮನಪಾಕ್ಕೆ ಕಳೆದ ಸುಮಾರು ಮೂರು ವರ್ಷಗಳಿಂದ 10,000 ರೂ. ಮೇಲ್ಪಟ್ಟ ಬಾಕಿಗೆ ಸಂಬಂಧಿಸಿ 4,301 ಸಂಪರ್ಕಗಳಿಂದ 12,64,36,759 ರೂ. ಕುಡಿಯುವ ನೀರಿನ ಬಾಕಿ ಬಿಲ್ ಪಾವತಿಯಾಗಬೇಕಿದೆ ಎಂದು ಅವರು ವಿವರಿಸಿದರು.

# ಆಸ್ತಿ ತೆರಿಗೆಯಲ್ಲೂ ಬಾಕಿ!
ನಗರದಲ್ಲಿ ಪ್ರಸ್ತುತ ಆಸ್ತಿ ತೆರಿಗೆಯ ಪಾವತಿಯಲ್ಲೂ ಸಾರ್ವಜನಿಕರು ಉದಾಸೀನ ತೋರುತ್ತಿದ್ದಾರೆ. ಸಾರ್ವಜನಿಕರು ಸರತಿಯಲ್ಲಿ ನಿಲ್ಲದೆ ತಾವಿರುವ ಸ್ಥಳದಿಂದಲೇ ಆನ್‌ಲೈನ್ ಮೂಲಕವೂ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಅದಕ್ಕಾಗಿ www.mangalorecity.mrc.gov.in > mcc online services> < use listed services ಮೂಲಕ ಈ ಸೇವೆ ಪಡೆಯಬಹುದಾಗಿದೆ ಎಂದು ಮೇಯರ್ ಕವಿತಾ ಸನಿಲ್ ನುಡಿದರು. ಉದ್ದಿಮೆ ಪರವಾನಿಗೆ ನವೀಕರಣ ಮಾಡದವರು ಕೂಡಾ ಆದಷ್ಟು ಶೀಘ್ರದಲ್ಲಿ ನವೀಕರಣ ಮಾಡುವ ಮೂಲಕ ಮನಪಾ ಜತೆ ಸಹಕರಿಸಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News