ಹೊಸ್ಮಠ: ಎರಡು ಅಂಗಡಿಗಳು ಬೆಂಕಿಗಾಹುತಿ

Update: 2017-11-14 10:32 GMT

ಕಡಬ, ನ.14: ಇಲ್ಲಿನ ಹೊಸ್ಮಠ ಬಸ್ ನಿಲ್ದಾಣದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಘಟನೆಯಲ್ಲಿ ಕುಟ್ರುಪ್ಪಾಡಿ ಗ್ರಾಮ ಪಂಚಾಯತಿಯ ಕೇಂದ್ರ ಗ್ರಂಥಾಲಯವು ಭಾಗಶಃ ಸುಟ್ಟು ಹೋಗಿದೆ. ಫ್ಯಾನ್ಸಿ ಅಂಗಡಿಯು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ಟೈಲರಿಂಗ್ ಮೆಷಿನ್, ಅಗತ್ಯ ದಾಖಲೆ ಪತ್ರಗಳು ಸೇರಿದಂತೆ ಭಾರೀ ಪ್ರಮಾಣದ ನಷ್ಟ ಅಂದಾಜಿಸಲಾಗಿದೆ. ಈ ಅಂಗಡಿಗಳು ಸುಗುಣಾ ದಯಾನಂದ ಎಂಬವರಿಗೆ ಸೇರಿದ್ದಾಗಿದೆ. 

ಘಟನೆಗೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ. ಮಂಗಳವಾರ ಬೆಳಗ್ಗೆ ಸ್ಥಳೀಯರು ಪೇಟೆಗೆ ಬಂದಾಗ ಅಂಗಡಿಯು ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದ್ದು, ಅದಾಗಲೇ ಮೇಲ್ಛಾವಣಿ ಸಂಪೂರ್ಣ ಕುಸಿದಿತ್ತು.

 ಸ್ಥಳಕ್ಕೆ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಮೆಸ್ಕಾಂ ಜೆಇ ನಾಗರಾಜ್, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News