​ಕಮಿಷನ್ ಹೆಚ್ಚಳಕ್ಕಾಗಿ ಧರಣಿ ಕುಳಿತ ದ.ಕ. ಜಿಲ್ಲಾ ಬೀಡಿ ಗುತ್ತಿಗೆದಾರರು

Update: 2017-11-14 13:13 GMT

ಮಂಗಳೂರು, ನ. 14: ಕಮಿಷನ್ ಹೆಚ್ಚಳಕ್ಕೆ ಒತ್ತಾಯಿಸಿ ಮಂಗಳೂರಿನ ಭಾರತ್ ಬೀಡಿ ಹಾಗೂ ಗಣೇಶ್ ಬೀಡಿ ಡಿಪೋದ ಎದುರು ಧರಣಿ ಆರಂಭಿಸಿರುವ ದ.ಕ. ಜಿಲ್ಲೆಯ ಬೀಡಿ ಗುತ್ತಿಗೆದಾರರು ತಮ್ಮ ಬೇಡಿಕೆ ಈಡೇರುವವರೆಗೆ ಧಣಿ ಮುಂದುವರಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ಬೀಡಿ ಕಂಪನಿಗಳ ಮಾಲಕರಿಗೆ ಮನವಿ ಸಲ್ಲಿಸಿ ಮಾತುಕತೆ ನಡೆಸಲಾಗಿದ್ದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಧರಣಿಗಿಳಿಯುವುದು ಅನಿರ್ವಾಯ ಎಂದು ಗುತ್ತಿಗೆದಾರರ ಪರವಾಗಿ ಕೆ.ಎ. ಖಾದರ್ ಕಿನ್ನಿಗೋಳಿ ತಿಳಿಸಿದರು.

ಸಹಾಯಕ ಕಾರ್ಮಿಕ ಆಯುಕ್ತರು ಈ ಬಗ್ಗೆ ಕಂಪನಿ ಮಾಲಕರ ಜತೆ ಮಾತುಕತೆಗಾಗಿ ಗುತ್ತಿಗೆದಾರರನ್ನು ಕರೆಸಿದ್ದರು. ಸಭೆಯಲ್ಲಿ ಮಾಲಕರು ಬೇಡಿಕೆ ಈಡೇರಿಸಲು ತಿರಸ್ಕರಿಸಿದ್ದರು.ಪ್ರತಿ ವರ್ಷದಿಂದ ಈ ವರ್ಷವೂ ನಾವು ಕಮಿಷನ್ ಹೆಚ್ಚಿಸುವಂತೆ ಮಾಲಕರಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಬೇಸರಿಸಿದರು.

ಬೀಡಿ ಗುತ್ತಿಗೆದಾರರು ಕಂಪನಿಗಳಿಂದ ಎಲೆ ತಂಬಾಕು ಪಡೆಯದೆ, ಬೀಡಿ ತಯಾರಿಸದೆ, ಧರಣಿ ಆರಂಭಿಸಿದ್ದು, ಬೇಡಿಕೆ ಈಡೇರುವವರೆಗೆ ಈ ಧರಣಿ ಮುಂದುವರಿಯಲಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ ತೊಕ್ಕೊಟ್ಟು ತಿಳಿಸಿದರು.

ಪ್ರಸ್ತುತ ಸಾವಿರ ಬೀಡಿಗೆ 16 ರೂ.ನಂತೆ ಕಮಿಷನ್ ನೀಡಲಾಗುತ್ತಿದೆ. 10 ರೂ. ಕಮಿಷನ್ ಹೆಚ್ಚಳ ಮಾಡುವಂತೆ ಗುತ್ತಿಗೆದಾರರು ಬೇಡಿಕೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಬೇಡಿಕೆ ಈಡೇರಿಸುವಲ್ಲಿ ಬೀಡಿ ಕಂಪನಿಗಳ ಮಾಲಕರು ವಿಫಲರಾಗಿದ್ದಾರೆ ಎಂದು ಆರೋಪಿಸುತ್ತಾ, ಧಿಕ್ಕಾರ ಕೂಗುತ್ತಾ ಗುತ್ತಿಗೆದಾರರು ಧರಣಿ ನಡೆಸಿದರು.

ಧರಣಿಯಲ್ಲಿ ಕರಾವಳಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯ ಬೀಡಿ ಗುತ್ತಿಗೆದಾರರ ಸಂಘ, ಕರಾವಳಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘ ಹಾಗೂ ಜೈ ಕರ್ನಾಟಕ ಸಂಘ ಪುತ್ತೂರು ಇರ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News