ಅನಿಲ ಭಾಗ್ಯ ಯೋಜನೆಗೆ ದ.ಕ. ಜಿಲ್ಲೆಯಿಂದ 15,858 ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್‌

Update: 2017-11-14 13:18 GMT

ಮಂಗಳೂರು, ನ.14:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯ ಮಂತ್ರಿ ಅನಿಲ ಭಾಗ್ಯ ಯೋಜನೆಗೆ ಪ್ರಥಮ ಹಂತದಲ್ಲಿ 15858 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ 49618 ಮಂದಿ ಅರ್ಹ ಫಲಾನುಭವವಿಗಳಿದ್ದಾರೆ. ಈ ಯೋಜನೆಯ ಪ್ರಕಾರ ಒಬ್ಬ ಫಲಾನುಭವಿಗೆ ಅನಿಲ ತುಂಬಿದ ಎರಡು ಸಿಲಿಂಡರ್, ಭದ್ರತಾ ಠೇವಣಿ, ಸುರಕ್ಷಾ ಪೈಪ್, ಡಿಜಿಟಲ್ ಬುಕ್ ಲೆಟ್, ಗ್ಯಾಸ್ ಸ್ಟೌವ್ ಹಾಗೂ ತಪಾಸಣಾ ಮತ್ತು ಜೋಡಣಾ ಶುಲ್ಕ ಸೇರಿದಂತೆ ಒಟ್ಟು ರೂ.4040ಮೊತ್ತ ವೆಚ್ಚವನ್ನು ಇಲಾಖೆ ಭರಿಸಲಿದೆ. ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ದೊರೆಯಲಿದೆ ಎಂದು ಸಸಿಕಾಂತ್ ಸೆಂತಿಲ್ ತಿಳಿಸಿದ್ದಾರೆ.

ರೈತರ ಬೆಳೆ ಸಮೀಕ್ಷೆಗೆ ಆ್ಯಪ್:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಬೆಳೆ ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕೃಷಿ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂಡ್ಯಾಡ್ ಮೊಬೈಲ್ (ವರ್ಷನ್ 4.5)ಮೂಲಕ ಕರ್ನಾಟಕ ಫಾರ್ಮರ್ಸ್‌ ಕ್ರಾಪ್ ಸರ್ವೇ ಆ್ಯಪ್‌ನ್ನು ಬಳಸಿಕೊಂಡು ತಮ್ಮ ಜಮೀನಿನ ಬೆಳೆಗಳ ಬಗ್ಗೆ ಫೊಟೊ ಸಹಿತ ದಾಖಲೆಗಳನ್ನು ದಾಖಲಿಸಿಕೊಳ್ಳಬಹುದಾಗಿದೆ. ಬಳಕೆದರರು ತಮ್ಮ ಹೆಸರು ಹಾಗೂ ಆಧಾರ್ ಸಮಖ್ಯೆಯನ್ನು ಬಳಸಿಕೊಂಡು ಈ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 94ಸಿ, ಮತ್ತು 94ಸಿ.ಸಿ ಅಡಿಯಲ್ಲಿ 30 ಸಾವಿರ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗಿದೆ .ಜಿಲ್ಲೆಯಲ್ಲಿ 18 ಸಾವಿರ ಪಡಿತರ ಚೀಟಿ ವಿತರಣೆಗೆ ಸಿದ್ಧವಾಗಿದೆ. ಅಂತರಾಜ್ಯ ಮರಳು ಸಾಗಟವನ್ನು ನಿರ್ಬಂಧಿಸಲಾಗಿದೆ. ಅಂತರ್ ಜಿಲ್ಲಾ ಮರಳು ಸಾಗಾಟವನ್ನು ನಿಯಂತ್ರಿಸಲು ಜಿಲ್ಲೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆದ್ದಾರಿಯ ಹಾಳಾದ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈ ಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಕಾನೂನು ಪ್ರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಕೈ ಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೆಂತಿಲ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News