ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ

Update: 2017-11-14 13:24 GMT

ಕೊಣಾಜೆ, ನ. 14: ಮಧುಮೇಹದ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವುದಕ್ಕಾಗಿ ನ.14 ರಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದಿನ ಆದುನಿಕ ಕಾಲಘಟ್ಟದಲ್ಲಿ ಇಂತಹ ರೋಗಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಮಾಜದಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಪ್ರಕಾಶ್ ಅವರು ಅಭಿಪ್ರಾಯಪಟ್ಟರು.

ಅವರು ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್ ನಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಧುಮೇಹದ ಬಗ್ಗೆ ಆರಂಭದಲ್ಲಿಯೇ ತಪಾಸಣೆ ಮಾಡಿದರೆ ಅಪಾಯವನ್ನು ತಡೆಯಬಹುದು. ಇದರ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಬಹಳಷ್ಟು ಅಪಾಯವನ್ನು ಎದುರಿಸುವ ಪರಿಸ್ಥಿತಿ ಬರಬಹುದು. ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಎಂದು ಹೇಳಿದರು.

ವೈದ್ಯರಾದ ಡಾ. ಶ್ರೀ ಕೃಷ್ಣ ವಿ ಆಚಾರ್ ಅವರು ಮಾತನಾಡಿ ಮಧುಮೇಹ ಕಾಯಿಲೆಯು ಹೆಚ್ಚಾಗಿ ಅನುವಂಶೀಯತೆ,ಬೊಜ್ಜುತನ, ನಿಯಮಿತ ವ್ಯಾಯಾಮದ ಕೊರತೆ ಮೊದಲಾದ ಕಾರಣಗಳಿಂದ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ. ಹಿಂದೆ ಸುಮಾರು 70 ವರ್ಷ ದಾಟಿದವರು ಮಾತ್ರ ಈ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇಂದು 25-30 ವರ್ಷದ ಜನರಲ್ಲೇ ಇದು ಕಂಡು ಬರುತ್ತಿರುವುದು ಆಶ್ಚರ್ಯಕರವಾಗಿದೆ. ಅದು ಕೂಡಾ ಮಹಿಳೆಯರು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ನಿಟ್ಟೆ ವಿವಿಯ ಮೆಡಿಕಲ್ ಸೂಪರಿಡೆಂಟ್ ಡಾ.ಶಿವಕುಮಾರ್ ಹಿರೇಮಠ್, ನಿಟ್ಟೆ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಇಂದ್ರಾಣಿ ಕರುಣಾಸಾಗರ್, ಸಮುದಾಯ ವಿಭಾಗದ ಮುಖ್ಯಸ್ಥರಾದ ಡಾ.ಸಂಜೀವಿನೀ ಬಡಿಗಾರ್, ಡಾ.ರಶ್ಮೀ ಕುಂದಾಪುರ, ಸ್ವೀಡನ್ ನ ಡಾ.ಆನ್ನಾ ಗೋಧೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಫೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News