ಆಳ್ವಾಸ್‍ನಲ್ಲಿ ಮಣಿಶಂಕರ್ ಅಯ್ಯರ್ ರಿಂದ ಉಪನ್ಯಾಸ

Update: 2017-11-14 13:51 GMT

ಮೂಡುಬಿದಿರೆ, ನ. 14: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್ ಮಿಜಾರಿನಲ್ಲಿರುವ ಎಐಇಟಿ ಅಡಿಟೋರಿಯಂನಲ್ಲಿ ಮಂಗಳವಾರ ನೆಹರೂ ಚಿಂತನೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. 

ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಜಾತಿ, ಧರ್ಮದ ತಾರಾತಮ್ಯದಲ್ಲಿ ರಾಷ್ಟ್ರೀಯತೆಯನ್ನು ಅಳೆಯುವುದು ಸಲ್ಲದು ಎನ್ನುವುದನ್ನು ಅಚಲವಾಗಿ ನಂಬಿದ್ದ ನೆಹರೂ, ಯಾವ ವ್ಯಕ್ತಿ ಇತರ ಭಾರತೀಯನನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೋ, ಆತನೆ ನಿಜವಾದ ಭಾರತೀಯ ಎಂದು ನಂಬಿದ್ದರು. ಇಂತಹ ನೈಜ್ಯ ಜಾತ್ಯತೀತತೆ ಮನೋಭಾವನೆಯಿಂದಲೇ ಪ್ರಜಾಪ್ರಭುತ್ವ ನಿಜಾರ್ಥದಲ್ಲಿ ಕಾಣಿಸಿಕೊಳ್ಳಲು ಸಾಧ್ಯ ಎನ್ನುವುದು ಅವರ ಪ್ರತಿಪಾಧನೆಯಾಗಿತ್ತು.

ನೆಹರೂ ಅವರ ಚಿಂತನೆಗಳು ಮೌಲ್ಯಯುತವಾಗಿದ್ದು, ಸರ್ವಧರ್ಮವನ್ನು ಸಮಾನತೆಯ ದೃಷ್ಟಿಕೋನದಿಂದ ಮುನ್ನಡೆಸುವಂತದ್ದು. ಆದರೆ ಇಂದು ಒಂದು ಸಿದ್ಧಾಂತದ ಹಿಂದೆ ಬಿದ್ದು, ಕೋಮುವಾದಿಗಳ ಸಂಕುಚಿತ ಮನೋಭಾವನೆಯಿಂದ ನೆಹರೂ ಕಂಡಿದ್ದ ಜಾತ್ಯಾತೀತ ಭಾರತ ನಲುಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಮನಸ್ಸು ಗಳನ್ನು ವಿಕೃತಗೊಳಿಸುವ ಕೆಲಸಗಳು ನಡೆಯುತ್ತಿದೆ. ನೆಹರೂ ಅವರನ್ನು ತಾರ್ಕಿಕವಾಗಿ ವಿಮರ್ಶಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬುದ್ಧ ಹೀನರ ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇಂತಹದೊಂದು ಬೆಳವಣಿಗೆ ಸಭ್ಯ ಸಮಾಜದ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ರೋಸ್ಟ್ರುಂ ಸಂಚಾಲಕ ರೋಹನ್ ಉಪಸ್ಥಿತರಿದ್ದರು.ಅಶ್ವಿನಿ ಜೈನ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News