ರಾಜಾರಾಂ ತಲ್ಲೂರು ಸೇರಿ ಐವರು ‘ಅಮ್ಮ’ ಪ್ರಶಸ್ತಿಗೆ ಆಯ್ಕೆ: ಸೇಡಂನಲ್ಲಿ ನ.26ರಂದು ಪ್ರಶಸ್ತಿ ಪ್ರದಾನ

Update: 2017-11-14 15:54 GMT

ಉಡುಪಿ/ಕಲಬುರಗಿ, ನ.14: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರಿ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡ ಮಾಡುವ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ಈ ಬಾರಿ ಲೇಖಕ-ಸಾಹಿತಿಗಳಾದ ರಾಜಾರಾಂ ತಲ್ಲೂರು, ಎಂ.ಆರ್.ಕಮಲ, ರೇಖಾ ಕಾಖಂಡಕಿ, ಎಚ್.ಆರ್. ಸುಜಾತಾ ಮತ್ತು ಗಿರೀಶ ಜಕಾಪುರೆ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.

ಬೆಂಗಳೂರಿನ ಸಾಹಿತಿ ಎಂ.ಆರ್.ಕಮಲ ಅವರ ‘ಮಾರಿಬಿಡಿ’ (ಕಾವ್ಯ), ಉಡುಪಿಯ ಲೇಖಕ ಅಂಕಣಕಾರ ರಾಜಾರಾಂ ತಲ್ಲೂರು ಅವರ ‘ನುಣ್ಣನ್ನ ಬೆಟ್ಟ’ (ಅಂಕಣ ಬರಹಗಳ ಸಂಕಲನ), ಬಾಗಲಕೋಟೆಯ ಸಾಹಿತಿ ರೇಖಾ ಕಾಖಂಡಕಿ ಅವರ ‘ವೈವಸ್ವತ’ (ಕಾದಂಬರಿ), ಹಾಸನದ ಲೇಖಕಿ ಎಚ್.ಆರ್. ಸುಜಾತಾರ ‘ನೀಲಿ ಮೂಗಿನ ನತ್ತು’ (ಲೇಖನಗಳ ಸಂಕಲನ) ಹಾಗೂ ಆಳಂದನ ಗಿರೀಶ ಜಕಾಪುರೆ ಅವರ ‘ನಾಝೀ ನರಮೇಧ’ (ಸಂಶೋಧನೆ) ಕೃತಿಗಳನ್ನು 17ನೇ ವರ್ಷದ ‘ಅ್ಮು ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರವನ್ನು ಒಳಗೊಂಡಿದೆ. ಇದೇ ನ.26ರಂದು ಸಂಜೆ 5:30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.

ಗೌರವ ಪುರಸ್ಕಾರ: ಕಳೆದ 9 ವರ್ಷಗಳಿಂದ ನೀಡಲಾಗುತ್ತಿರುವಅಮ್ಮ ಗೌರವ ಪುರಸ್ಕಾರಕ್ಕೆ ನಾಡು-ನುಡಿಗೆ ನೀಡಿದ ಕೊಡುಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಈ ಬಾರಿ ಹಿರಿಯ ಲೇಖಕ ಡಾ.ಚೆನ್ನಣ್ಣ ವಾಲೀಕಾರ ಕಲಬುರಗಿ, ಎ.ರಮೇಶ ಉಡುಪ ಕಾಸರಗೋಡು, ಲೇಖಕಿ ಡಾ.ವಿನಯಾ ಜಿ.ವಕ್ಕುಂದ ಅಳ್ನಾವರ, ವೈದ್ಯ ಲೇಖಕ ಡಾ.ಎಸ್.ಎಸ್. ಗುಬ್ಬಿ ಯಾದಗಿರಿ, ಸಾಂಸ್ಕೃತಿಕ ವ್ಯಕ್ತಿತದ್ವ ಡಾ.ರಮೇಶ ಐನಾಪುರ ಸೇಡಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರತ್ನಕಲಾ ಮುನ್ನೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News