ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ವಜಾಗೊಳಿಸಿದ ಹೈಕೋರ್ಟ್

Update: 2017-11-14 16:21 GMT

ಪುತ್ತೂರು, ನ.14: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಹಾಲಿ ವ್ಯವಸ್ಥಾಪನಾ ಸಮಿತಿಯನ್ನು ರಾಜ್ಯ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ತಿಂಗಳಲ್ಲಿ ಹೊಸ ಸಮಿತಿಯನ್ನು ರಚಿಸುವಂತೆ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರಿಗೆ ಆದೇಶಿಸಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಹಾಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕಾತಿ ಕ್ರಮವನ್ನು ಪ್ರಶ್ನಿಸಿ ಸದಸ್ಯತ್ವ ಆಕಾಂಕ್ಷಿಯಾಗಿದ್ದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ನಿವಾಸಿ ಮೀನಾಕ್ಷಿ ಗೌಡ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದಿಂದ ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿತ್ತು.

ಕಳೆದ ವರ್ಷ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಎನ್. ಸುಧಾಕರ ಶೆಟ್ಟಿ, ಯು.ಪಿ. ರಾಮಕೃಷ್ಣ, ಕೆ. ಸಂಜೀವ ನಾಯ್ಕ, ಎನ್. ಕರುಣಾಕರ ರೈ, ನಾಗರಾಜ್, ಎನ್.ಕೆ., ಎ. ಜಾನು ನಾಯಕ್, ನಯನಾ ರೈ, ಎಂ.ಪಿ. ರೋಹಿಣಿ ಆಚಾರ್ಯ, ವಸಂತ ಕುಮಾರ್ ಕೆದಿಲಾಯ ಅವರನ್ನು ನೇಮಕಗೊಳಿಸಲಾಗಿತ್ತು. ಎನ್. ಸುಧಾಕರ ಶೆಟ್ಟಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದರು.

ರಾಜಕೀಯ ಪ್ರೇರಿತ: ವಾಸ್ತವವಾಗಿ ಧಾರ್ಮಿಕ ಪರಿಷತ್ ಎ ತರಗತಿಯ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಯನ್ನು ಮಾಡುತ್ತದೆ. ಅರ್ಜಿದಾರರು ಸಮಿತಿ ಸದಸ್ಯತ್ವಕ್ಕಾಗಿ ಧಾರ್ಮಿಕ ಪರಿಷತ್‌ಗೆ ಅರ್ಜಿ ಸಲ್ಲಿಸಿ, ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಧಾರ್ಮಿಕ ಪರಿಷತ್ ಪಟ್ಟಿಯನ್ನು ನೇಮಕಾತಿ ಸಂದರ್ಭದಲ್ಲಿ ಅಂಗೀಕರಿಸಿರಲಿಲ್ಲ.

ವ್ಯವಸ್ಥಾಪನಾ ಸಮಿತಿ ನೇಮಕಾತಿ ವಿಚಾರದಲ್ಲಿ ಶಾಸಕರ ಪರ ಮತ್ತು ವಿರೋಧಿ ಗುಂಪುಗಳ ನಡುವೆ ರಾಜಕೀಯ ಗುದ್ದಾಟವೂ ನಡೆದಿತ್ತು. ಆದರೂ ಇಲ್ಲಿನ ಶಾಸಕರು ತಮ್ಮ ಬೆಂಬಲಿಗರನ್ನು ನೇಮಕ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸಮಿತಿ ವಜಾಗೊಂಡಿರುವುದರಿಂದ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ಧಾರ್ಮಿಕ ಪರಿಷತ್ ನಿಯಮಾವಳಿಯಂತೆ ರಾಜಕೀಯ ಪಕ್ಷದ ಸದಸ್ಯರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಬಾರದು ಎಂದಿದ್ದರೂ ಇಲ್ಲಿ ಇದಕ್ಕೆ ವ್ಯತಿರಿಕ್ತ ಆಯ್ಕೆ ನಡೆದಿತ್ತು ಎಂಬ ಆರೋಪವೂ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News