×
Ad

ಬಂಟ್ವಾಳ: ಅಕ್ರಮ-ಸಕ್ರಮ ಅರ್ಜಿದಾರರಿಗೆ ಹಕ್ಕುಪತ್ರ ಮಂಜೂರಾತಿಗೆ ಒತ್ತಾಯಿಸಿ ಎಸ್‌ಡಿಪಿಐ ಮನವಿ

Update: 2017-11-15 18:06 IST

ಬಂಟ್ವಾಳ, ನ.15: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ-ಸಕ್ರಮ ಅರ್ಜಿದಾರರಿಗೆ ಹಕ್ಕುಪತ್ರ ಮಂಜೂರಾತಿ ವಿಳಂಬದ ವಿರುದ್ಧ ಎಸ್‌ಡಿಪಿಐ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುಮಾರು 250 ಮಂದಿ ತಾವು ವಾಸಿಸುತ್ತಿರುವ ಮನೆ ಅಡಿಸ್ಥಳದ ನಿವೇಶನದ ಹಕ್ಕು ಪತ್ರಕ್ಕಾಗಿ ಸರಕಾರದ ಅಕ್ರಮ ಸಕ್ರಮ ಯೋಜನೆಯಡಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಸರಕಾರಕ್ಕೆ ಪಾವತಿಸಬೇಕಾಗಿರುವ ಮೊತ್ತವನ್ನೂ ಪಾವತಿಸಿರುತ್ತಾರೆ. ಆದರೆ ಇದುವರೆಗೂ ಅವರ ಕೈಗೆ ಹಕ್ಕುಪತ್ರವು ಸಿಕ್ಕಿರುವುದಿಲ್ಲ. ಅಲ್ಲದೆ ಅಕ್ರಮ-ಸಕ್ರಮ ಅರ್ಜಿದಾರರಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಹಕ್ಕು ಪತ್ರವನ್ನು ಮಂಜೂರು ಮಾಡಿ ಈಗಾಗಲೇ ಪಂಚಾಯತ್ ಕಚೇರಿಗೆ ರವಾನಿಸಿ ಮೂರು ತಿಂಗಳು ಕಳೆದಿರುತ್ತದೆ. ಆದರೆ ಪಂಚಾಯತ್ ಕಚೇರಿಯವರು ಸಕಾರಣಗಳಿಲ್ಲದೆ ಹಕ್ಕುಪತ್ರ ವಿತರಣೆಯಲ್ಲಿ ಈ ರೀತಿಯ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಕಾನೂನು ವಿರೋಧಿ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಮುಂದಿನ ವಿಧಾನಸಭಾ ಮತ್ತು ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ರೂಢ ಕಾಂಗ್ರೆಸ್ ಪಕ್ಷವು ಅಕ್ರಮ ಸಕ್ರಮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯನ್ನು ವಿಳಂಬ ಮಾಡಿ ಅದರ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಎಸ್‌ಡಿಪಿ ಆರೋಪಿಸಿದೆ.

ಒಂದು ವಾರದೊಳಗೆ ಸಂಬಂಧ ಪಟ್ಟ ಅರ್ಜಿದಾರರಿಗೆ ಹಕ್ಕು ಪತ್ರ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭ ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಶಾಹುಲ್ ಎಸ್.ಎಚ್., ಸುಲೈಮಾನ್ ಉಸ್ತಾದ್, ಇಕ್ಬಾಲ್ ಫರಂಗಿಪೇಟೆ, ಅಬ್ಬಾಸ್ ಪರಿಮಾರ್, ಮುಹಮ್ಮದ್ ಶಾಫಿ, ಸಿದ್ದೀಕ್ ಮತ್ತಿತರರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News