ಸರ್ಕಾರ ರೈತರನ್ನು ಕತ್ತಲಲ್ಲಿರಿಸಿದೆ-ಧನಕೀರ್ತಿ ಬಲಿಪ
ಪುತ್ತೂರು, ನ, 15: ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ದರ ನಿಗದಿಪಡಿಸಿ ಎಂಬುದು ರೈತರ ಬಹಳಷ್ಟು ವರ್ಷಗಳ ಬೇಡಿಕೆಯಾಗಿದ್ದು, ನಮ್ಮನ್ನಾಳಿದ ಎಲ್ಲಾ ಸರ್ಕಾರಗಳೂ ಈ ವಿಚಾರದಲ್ಲಿ ರೈತರನ್ನು ಕತ್ತಲಲ್ಲಿ ಇರಿಸುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಗೌರವ ಅಧ್ಯಕ್ಷ ಧನಕೀರ್ತಿ ಬಲಿಪ ಅವರು ಆರೋಪಿಸಿದರು.
ಅವರು ಬುಧವಾರ ಪುತ್ತೂರು ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿ ಮತ್ತು ರೈತರ ಕೃಷಿ ಸಾಲ ಮನ್ನಾ ಆಗ್ರಹದ ಪ್ರತಿಭಟನೆಯಲ್ಲಿ ಮಾನತಾಡಿದರು. ರೈತರಲ್ಲಿ ರಾಜಕಾರಣಿಗಳಂತೆ ಕಳ್ಳರು ಸುಳ್ಳರಿಲ್ಲ. ಕಾನೂನು ಬದ್ದವಾಗಿಯೇ ಬದುಕುತ್ತಿರುವ ರೈತರ ಬಗ್ಗೆ ಸರ್ಕಾರ ಕಾನೂನಿನ ಹೆಸರಿನಲ್ಲಿ ದೌರ್ಜನ್ಯ ನಡೆಸುತ್ತಿದೆ. ಬಿಸಿಲಿಗೆ ದುಡಿಯುತ್ತಿರುವ ರೈತರ ಬಗ್ಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತವರು ಕಾನೂನು ರೂಪಿಸುವುದರಿಂದ ಇಂದಿಗೂ ನ್ಯಾಯ ಸಿಗುತ್ತಿಲ್ಲ. ಸರ್ಕಾರದ ಧೋರಣೆಯಿಂದಾಗಿ ನಾವು ಸಾಲಗಾರರಾಗಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಮಾತನಾಡಿ ಮೋಜು ಮಸ್ತಿಯಲ್ಲಿ ಪ್ರಧಾನಿ ನಿರತರಾಗಿದ್ದು, ರೈತರ ಕಷ್ಟಗಳಿಗೆ ಸ್ಪಂಧಿಸಲು ಸಾಧ್ಯವಾಗದ ಪ್ರದಾನಿ ಮೋದಿ ಅವರು ತನ್ನ ಸ್ಥಾನವನ್ನು ಬಿಟ್ಟು ಮತ್ತೆ ಟೀ ಹೋಟೆಲ್ ನಡೆಸಲಿ. ಹಲವಾರು ಭಾಗ್ಯವನ್ನು ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾಕ್ಕೆ ದುಡ್ಡಿಲ್ಲ. ಕಡು ಬಡವರಿಗೆ ನೀಡಲಾಗುವ 94ಸಿ ಹಕ್ಕು ಪತ್ರದಲ್ಲಿ ಗ್ರಾಮಕರಣಿಕರಿಂದ ಹಿಡಿದು ತಹಸೀಲ್ದಾರರ ತನಕ ಲಂಚ ನಡೆಯುತ್ತಿದೆ. ಇದನ್ನು ತಡೆಯುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದರು.
ರೈತಸಂಘದ ಜಿಲ್ಲಾ ಗೌರವ ಸಲಹೆಗಾರ ಡಾ.ಪಿ.ಕೆ.ಎಸ್ ಭಟ್ ಮಾತನಾಡಿ ಜೀವನಾವಶ್ಯಕ ವಸ್ತುಗಳಿಗೆ ತೆರಿಗೆ ಹಾಕುವ ಸಂದರ್ಭದಲ್ಲಿ ಸರ್ಕಾರಗಳು ಜನರ ಅಭಿಪ್ರಾಯ ಪಡೆದು ಕೊಳ್ಳಬೇಕು ಎಂದರು.
ಪ್ರತಿಭಟನಾಕಾರರು ಇಲ್ಲಿನ ಎಪಿಎಂಸಿ ರಸ್ತೆಯ ಬಳಿಯಿಂದ ಮಿನಿವಿಧಾನಸೌಧದ ತನಕ ಮೆರವಣಿಗೆ ನಡೆಸಿದರು. ರೈತರ ಪ್ರಮುಖ ಬೇಡಿಕೆಯಾಗಿರುವ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘ ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಆಧಾರದಲ್ಲಿ ಮಸೂದೆ ಜಾರಿಗೊಳಿಸಬೇಕು. ಪಡಿತರ ಚೀತಿ ಆಹಾರ ಪಡೆಯುವ ಗ್ರಾಹಕರ ಹೆಬ್ಬೆರಳು ಗುರುತಿಗಾಗಿ ಸತಾಯಿಸುವುದನ್ನು ತಕ್ಷಣ ಸರಿಪಡಿಸಬೇಕು. ಕುಮ್ಕಿ ಜಮೀನು ಹಕ್ಕುಪತ್ರಕ್ಕೆ ತಕ್ಷಣ ಆಧ್ಯಾದೇಶ ನೀಡಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಪ್ರಮುಖರಾದ ದರ್ಣಪ್ಪ ಗೌಡ ಇಡ್ಯಾಡಿ, ಮುರುವ ಮಹಾಬಲ ಭಟ್, ಯನ್. ಈಶ್ವರ ಭಟ್ ಬಡಿಲ, ಮನೋಹರ ಶೆಟ್ಟಿ, ಇದಿನಬ್ಬ, ಸುದರ್ಶನ್ ಕಂಪ, ಸುಬ್ರಹ್ಮಣ್ಯ ಭಟ್, ವಿಕ್ಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.