ಹೆಬ್ರಿ ಭೋಜ ಶೆಟ್ಟಿ, ಸುರೇಶ್ ಶೆಟ್ಟಿ ಹತ್ಯೆ ಪ್ರಕರಣ: ಜ.5ಕ್ಕೆ ಆರೋಪಿಗಳ ವಿಚಾರಣೆ ಮುಂದೂಡಿಕೆ
ಉಡುಪಿ, ನ.15:ಹೆಬ್ರಿ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸದ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜನವರಿ 5ಕ್ಕೆ ನಿಗದಿ ಪಡಿಸಿ ಆದೇಶ ನೀಡಿತು.
ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಕೊಪ್ಪದ ನೀಲಗುಳಿ ಪದ್ಮನಾಭ (46) ಇಂದು ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾದರೂ, ಕೊಯಮತ್ತೂರಿ ನಲ್ಲಿರುವ ಶಂಕಿತ ನಕ್ಸಲ್ ಈಶ್ವರ ಯಾನೆ ವೀರಮಣಿ (65) ಹಾಗೂ ಬೆಂಗಳೂರು ಜೈಲಿನಲ್ಲಿರುವ ರಮೇಶ್ ಅವರನ್ನು ಪೊಲೀಸರು ತಾಂತ್ರಿಕ ಕಾರಣಗಳಿಗಾಗಿ ನ್ಯಾಯಾಲಯ ಮುಂದೆ ಹಾಜರು ಪಡಿಸಲಿಲ್ಲ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅವರು ಇಂದು ಬೆಳಗ್ಗೆ ಪ್ರಕರಣವನ್ನು ಕೈಗೆತ್ತಿಕೊಂಡಾಗ ಈ ಪ್ರಕರಣದಲ್ಲಿ ಜಾಮೀನು ಪಡೆದಿರುವ ನೀಲಗುಳಿ ಪದ್ಮನಾಭ ಮಾತ್ರ ಹಾಜರಾದರು. ಇದರಿಂದ ನ್ಯಾಯಾಧೀಶರು, ಇಂದಿಗೆ ನಿಗದಿಯಾಗಿದ್ದ ದೋಷಾರೋಪಣೆ ಮಾಡುವ ಮತ್ತು ಅದಕ್ಕೆ ಉತ್ತರಿಸುವ ದಿನಾಂಕವನ್ನು ಜ.5ಕ್ಕೆ ನಿಗದಿಪಡಿಸಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲ ಉಡುಪಿಯ ಶಾಂತರಾಮ್ ಶೆಟ್ಟಿ ಹಾಜರಿದ್ದರು.
ಪ್ರಕರಣದ ಹಿನ್ನೆಲೆ: ನಕ್ಸಲ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ ಶಿಕ್ಷಕರಾಗಿದ್ದ ಹೆಬ್ರಿ ಸೀತಾನದಿಯ ಭೋಜ ಶೆಟ್ಟಿ ಹಾಗೂ ಅಂದು ಅವರ ಜೊತೆಗಿದ್ದ ಸ್ನೇಹಿತ, ನೆರೆಮನೆಯ ಸುರೇಶ್ ಶೆಟ್ಟಿ ಅವರನ್ನು 2008ರ ಮೇ15ರ ರಾತ್ರಿ 8:15ರ ಸುಮಾರಿಗೆ ನಕ್ಸಲರ ತಂಡ ಗುಂಡು ಹಾರಿಸಿ ಕೊಲೆ ಮಾಡಿತ್ತು.
ಈ ಪ್ರಕರಣದಲ್ಲಿ ಆರೋಪಿಗಳಾದ ಮನೋಹರ್, ಸಂಜೀವಕುಮಾರ್, ವಸಂತ, ದೇವೇಂದ್ರ, ಬಿ.ಜೆ.ಕೃಷ್ಣಮೂರ್ತಿ, ನಂದಕುಮಾರ್, ನೀಲಗುಳಿ ಪದ್ಮನಾಭ, ಚಂದ್ರಶೇಖರ್ ಗೋರ್‌ಬಾಲ್, ರಮೇಶ್, ಈಶ್ವರ ಯಾನೆ ವೀರಮಣಿ ಹಾಗೂ ಆಶಾ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದರಲ್ಲಿ ಕ್ರಿಮಿನಲ್ ಸಂಚು ರೂಪಿಸಿದ ಆರೋಪಿಯಾಗಿ, ತಲೆಮರೆಸಿ ಕೊಂಡಿದ್ದ ವೀರಮಣಿಯನ್ನು ತಮಿಳುನಾಡು ಪೊಲೀಸರು 2015ರ ಮೇ 4 ರಂದು ಕೊಯಮುತ್ತೂರಿನಲ್ಲಿ ಟೀ ಅಂಗಡಿಯೊಂದರಲ್ಲಿ ಬಂಧಿಸಿದ್ದರು. ಅವರೀಗ ಕೊಯಮುತ್ತೂರು ಜೈಲಿನಲ್ಲಿದ್ದಾರೆ. ಭೋಜ ಶೆಟ್ಟಿ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಉಡುಪಿ ನ್ಯಾಯಾಲಯ ತಿರಸ್ಕರಿಸಿದ್ದು ಅವರೀಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನಿಬ್ಬರು ಆರೋಪಿ ಗಳಾಗಿರುವ ನೀಲಗುಳಿ ಪದ್ಮನಾಭ ಹಾಗೂ ಬೆಂಗಳೂರು ಜೈಲಿನಲ್ಲಿರುವ ರಮೇಶ್ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ದೊರೆತಿದೆ. ರಮೇಶ್ ಬೇರೆ ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿದ್ದರೆ, 10 ತಿಂಗಳು ಚಿಕ್ಕಮಗಳೂರು ಜೈಲಿನಲ್ಲಿದ್ದ ನೀಲಗುಳಿ ಕಳೆದ ಸೆಪ್ಟಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಭೋಜ ಶೆಟ್ಟಿ ಪ್ರಕರಣದ ಆರೋಪಿಗಳ ಪೈಕಿ ಮನೋಹರ್ ಕಳಸದಲ್ಲಿ, ವಸಂತ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಇನ್ನೋರ್ವ ಆರೋಪಿ ಸಂಜೀವ ಕುಮಾರ್ ಆಂಧ್ರ ಪ್ರದೇಶ ದಲ್ಲಿ ಪೊಲೀಸರಿಗೆ ಶರಣಾಗಿ ಬಳಿಕ ಪರಾರಿಯಾಗಿದ್ದಾರೆ. ಬಿ.ಜೆ. ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದು, ಈವರೆಗೆ ಬಂಧನವಾಗಿಲ್ಲ. ದೇವೇಂದ್ರ, ನಂದಕುಮಾರ್, ಚಂದ್ರಶೇಖರ್, ಆಶಾ ಈಗಾಗಲೇ ಖುಲಾಸೆಗೊಂಡಿದ್ದಾರೆ. ನೀಲಗುಳಿ ಪದ್ಮನಾಭ, ರಮೇಶ್, ವೀರಮಣಿ ವಿರುದ್ಧ ಮಾತ್ರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.