×
Ad

ಭಾರತದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ -ನ್ಯಾ. ಸಂತೋಷ್ ಹೆಗ್ಡೆ

Update: 2017-11-15 20:36 IST

ಮಂಗಳೂರು, ನ.15: ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭಾರತದ ಸಂವಿಧಾನದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ನಡೆಯುತ್ತಿರುವ ಲೋಪಗಳಿಂದಾಗಿ ಮತ್ತು ಪ್ರಜಾ ಪ್ರಭುತ್ವದದಲ್ಲಿ ಸಕ್ರೀಯರಾಗಿರಬೇಕಾದ ಪ್ರಜ್ಞಾವಂತ ಜನವರ್ಗ ಮೌನವಹಿಸಿರುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಯೆನೆಪೊಯ ವಿಶ್ವ ವಿದ್ಯಾನಿಲಯದ ಅಕಾಡೆಮಿಕ್ ಬ್ಲಾಕ್‌ನ ಸಭಾಂಗಣದಲ್ಲಿ ಸಂಸ್ಥೆಯ ಸಂಸ್ಥಾಪಕರ ದಿನದ ಅಂಗವಾಗಿ ವೈಎಂಕೆ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮ ಮತ್ತು ಯೆನೆಪೊಯ ಶಿಕ್ಷಕ ಪ್ರಶಸ್ತಿ 2017 ಪ್ರದಾನ ಕಾರ್ಯಕ್ರ ಮವನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು.

ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ವಿವಿಧ ರೀತಿಯ ರಾಜಪ್ರಭುತ್ವದ ಆಡಳಿತ ವ್ಯವಸ್ಥೆ ಇತ್ತು. ಸ್ವಾತಂತ್ರ ನಂತರವೂ ಈ ಆಡಳಿತ ವ್ಯವಸ್ಥೆಯ ಪಳೆಯುಳಿಕೆಗಳು ಉಳಿದುಕೊಂಡಿದೆ. ರಾಜರ ಸ್ಥಾನದಲ್ಲಿ ಜನಪ್ರತಿನಿಧಿಗಳು ಕುಳಿತು ಆಡಳಿತ ನಡೆಸುತ್ತಿರುವುದು ವಿಪರ್ಯಾಸ. ಭಾರತದ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುಗಳು. ಪ್ರಜೆಗಳಿಂದ ಆರಿಸಿ ಬಂದ ಪ್ರತಿನಿಧಿಗಳು ಪ್ರಜೆಗಳ ಸೇವಕರಾಗಬೇಕಾಗಿತ್ತು ಆದರೆ ದೇಶದ ಪ್ರಜಾಪ್ರಭುತ್ವ ವನ್ನು ಗಮನಿಸಿದಾಗ ಪ್ರಜೆಗಳು ಪ್ರಭುಗಳಾಗಿ ಉಳಿದಿಲ್ಲ. ಉದಾಹರಣೆಗೆ ಅಣ್ಣಾ ಹಜಾರೆಯವರು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಜನಪ್ರತಿನಿಧಿಯೊಬ್ಬರು ಈ ರೀತಿಯ ಆಗ್ರಹ ಮಾಡಲು ಅವರು ಯಾರು ಎಂದು ಕೇಳಿದ್ದಾರೆ. ಜನರಿಂದ ಮತಪಡೆದು ಆಯ್ಕೆಯಾದ ಪ್ರತಿನಿಧಿ ಯನ್ನು ಮತದಾರ ಪ್ರಶ್ನೆಸಬಾರದು ಎನ್ನುವ ಮನೋಭಾವ ಇರುವ ಜವಾಬ್ದಾರಿ ಮರೆತ ಜನಪ್ರತಿನಿಧಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯಾಗಲಿ, ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಲಿ ಜನ ಸೇಕರು ಎನ್ನುವುದನ್ನು ಮರೆಯಬಾರದು ಎಂದು ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ದೇಶದ ಸಂಸತ್, ವಿಧಾನ ಸಭೆ, ಪರಿಷತ್‌ಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಯಾಗಬೇಕಾದ ಸ್ಥಳಗಳು ಅನಗತ್ಯ ಚರ್ಚೆ ಗದ್ದಲಗಳಿಂದಾಗಿ ಜನರ ಹಣ ಪೋಲಾಗುತ್ತಿದೆ. ಸಕ್ರೀಯವಾಗಿ ಭಾಗವಹಿಸಬೇಕಾದ ಜನಪ್ರತಿನಿಧಿಗಳು ಸಭೆಯ ಕಲಾಪಗಳಲ್ಲಿ ಪಾಲ್ಗೊಳ್ಳದೆ ಜನರ ತೆರಿಗೆಯ ಹಣ ವ್ಯರ್ಥವಾಗುತ್ತಿದೆ. ಜನರ ಸೇವಕರಾಗಿರುವ ಸಂಸದರಿಗೆ ಪ್ರತಿ ತಿಂಗಳು ತಲಾ ಎರಡೂವರೆ ಲಕ್ಷ ಜನರ ಹಣ ಅವರ ಸಂಭಾವನೆ, ಭತ್ತ್ಯೆಗಳಿಗಾಗಿ ವೆಚ್ಚಮಾಡಲಾಗುತ್ತಿದೆ. ಸಂಸತ್‌ನ ಒಂದು ದಿನದ ಅಧಿವೇಶ ನಡೆಸಲು 10 ಕೋಟಿ ರೂ ವೆಚ್ಚವಾಗುತ್ತದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕೇವಲ 22 ಜನ ಶಾಸಕರು ಮಾತ್ರ ವಹಿಸಿದ್ದಾರೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಎಷ್ಟು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಆದರೂ ಅಲ್ಲಿ ಜನರ ಸಮಸ್ಯೆಗಳ ಬಗ್ಗೆ ಸೂಕ್ತ ಚರ್ಚೆಯಾಗುತ್ತಿಲ್ಲ ವಿರೋಧ ಪಕ್ಷಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಇವೆಲ್ಲವನ್ನು ತಿಳಿದು ಮೌನವಹಿಸಿರುವ ಬಹು ದೊಡ್ಡ ಜನಸಮೂಹ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.

ಯೆನೆಪೊಯ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ:- ಸಮಾರಂಭದಲ್ಲಿ 2017ರ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಯಾಕೂಬ್ ಹಾಗೂ ಯಮುನಾ ರವರಿಗೆ ಅತಿಥಿಗಳು ವಿತರಿಸಿ ಗೌರವಿಸಿದರು. ಯೆನೆಪೋಯ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ಸಂಸ್ಥೆಗಳ ಆಡಳಿತ ನಿರ್ದೇಶಕ ಫರ್ಹಾದ್ ಯೆನೆಪೊಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್, ಕುಲಸಚಿವ ಶ್ರೀಕುಮಾರ್ ಮೆನನ್ ಮೊದಲಾದವರು ಉಪಸ್ಥಿತರಿದ್ದರು. ಯೆನೆಪೊಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮೆಗ್ರಾಥ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News