"ಸೈನ್ಸ್ ಆ್ಯಂಡ್ ಫನ್" ಶೈಕ್ಷಣಿಕ ವಿಜ್ಞಾನಯಂತ್ರ ಪ್ರದರ್ಶನ
ಮಿಜಾರು, ನ. 15: ಆಳ್ವಾಸ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ, ಬುಧವಾರ "ವಿಜ್ಞಾನ ಮತ್ತು ಮೋಜು" ಎಂಬ ವಿದ್ಯಾರ್ಥಿ ನಿರ್ಮಿತ ಯಂತ್ರ ಪ್ರದರ್ಶನವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು. 100ಕ್ಕೂ ಹೆಚ್ಚಿನಯಂತ್ರ ಮಾದರಿಗಳು, ಸ್ವಯಂಚಾಲಿತ ವಾಹನಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಮಕ್ಕಳಿಗೆ ಯಂತ್ರಗಳ ಬಗ್ಗೆ ಜ್ಞಾನ ಹೆಚ್ಚಿಸಿ ಯಂತ್ರ ಚಾಲನೆಯ ಸುಲಭ ವಿಧಾನಗಳನ್ನು ತಿಳಿಸುವುದು ಇದರ ಉದ್ದೇಶ. ಹಲವು ವರ್ಷಗಳಿಂದ ಈ ಪ್ರದರ್ಶನ ನಡೆದು ಬಂದಿದ್ದು ಪ್ರತೀ ವರ್ಷವೂ ಮೆಕ್ಯಾನಿಕಲ್ ವಿದ್ಯಾರ್ಥಿಗಳು ರೂಪಿಸಿರುವ ಮಾದರಿಗಳನ್ನಷ್ಟೇ ಪ್ರದರ್ಶಿಸಲಾಗುತ್ತಿತ್ತು. ಈ ವರ್ಷದ ವಿಶೇಷವೆಂದರೆ ಉಳಿದ ವಿಭಾಗಗಳ ವಿದ್ಯಾರ್ಥಿ ಮಾದರಿಗಳನ್ನೂ ನಾವು ಸ್ವಾಗತಿಸಿದ್ದೇವೆ ಎಂದು ಕಾರ್ಯಕ್ರಮದ ಸಂಯೋಜಕ ಕುಮಾರಸ್ವಾಮಿ ತಿಳಿಸಿದರು.
ಮೂಡುಬಿದಿರೆ ಪರಿಸರದ ಸುಮಾರು 2000 ಶಾಲಾಮಕ್ಕಳು ಪ್ರದರ್ಶನದಲ್ಲಿ ಭಾಗವಹಿಸಿ ಯಂತ್ರಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡರು. ಸೆಂಟ್ರಿಫ್ಯೂಗಲ್ ಪಂಪ್( ಸೆಂಟ್ರಿಫ್ಯೂಗಲ್ ಶಕ್ತಿ ಬಳಸಿ ನೀರೆತ್ತುವಯಂತ್ರ), ವಯೋಲಿನ್ ಜೆನರೇಟರ್ (ವಯೋಲಿನ್ ನಲ್ಲಿ ಬಳಸುವ ತಂತ್ರಗಾರಿಕೆಯನ್ನು ಪಯೋಗಿಸಿ ಶಕ್ತಿ ಉತ್ಪಾದನೆ), ಹೈಡ್ರೋಲಿಕ್ ಕ್ರೇನ್ (ಜಲಶಕ್ತಿಯಿಂದ ಕೆಲಸ ಮಾಡುವ ಕ್ರೇನ್), ಮಾನವರಹಿತ ಸಮುದ್ರ ಪ್ಲೇನ್‌ಗಳು, ಮರದ ಫಿರಂಗಿಗಳು (ಸಿಡಿಮದ್ದಿಗೆ ವಿದ್ಯುಚ್ಛಕ್ತಿ ಪ್ರಚೋದನೆ ಬಳಸುವ ಫಿರಂಗಿಗಳು) ಇವುಗಳ ಪ್ರಾತ್ಯಕ್ಷಿಕೆ ನಡೆಯಿತು.
ಇನ್ನು ಪರಿಸರ ಸ್ನೇಹಿ ಯಂತ್ರಗಳಾದ "ನೀರಿನ ತೈಲಾಂಶ ವಿಭಜನಾಯಂತ್ರ", ಇಂಧನರಹಿತ ಇಂಜಿನ್ಗಳು, ಕಸವನ್ನು ಬಳಸಿ ನಿರ್ಮಿಸಿದ ಕಾರ್, ಬೈಕ್ ಮಾದರಿಗಳು, ಸೌರ ಹವಾನಿಯಂತ್ರಕಗಳು, ಜಲವಿದ್ಯುಚ್ಛಕ್ತಿ ಯಂತ್ರಗಳು ಪ್ರದರ್ಶನದ ಕೇಂದ್ರ ಬಿಂದುಗಳಾಗಿದ್ದವು. ಸ್ಕ್ರಿಬ್ಲಿಂಗ್ ರೊಬೊಟ್, ವಾಕಿಂಗ್ ವಾಟರ್ಸ್ ಇಂತಹ ವಿದ್ಯಾರ್ಥಿ ಅನ್ವೇಷಣೆಯ ಮಾದರಿಗಳು ಗಮನ ಸೆಳೆದವು.
ವಿದ್ಯಾರ್ಥಿಗಳು ಸೆರೆಹಿಡಿದ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಿದ್ದಲ್ಲದೆ, ಮೆಕ್ಯಾನಿಕ್ಸ್ ಗೆ ಸಂಬಂಧಿಸಿದ ಕೆಲವು ಮೋಜಿನ ಆಟಗಳಾದ "ಬಲೂನ್ ಸೆನ್ಸರ್", ಪಜಲ್, ಹಾಟ್ ಸ್ಯಾನಿಟೈಜರ್ ಇವುಗಳನ್ನೂ ಆಯೋಜಿಸಲಾಗಿತ್ತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ, ಮ್ಯೆಕಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಕೆ, ಪ್ರಾಧ್ಯಾಪರುಗಳಾದ ಒಗ್ಗಾರ್, ಶ್ರೀನಿವಾಸ್ ಉಪಸ್ಥಿತರಿದ್ದರು.