×
Ad

ಅಪಾಯದ ಸ್ಥಿತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್: ಆತಂಕದಲ್ಲಿರುವ ನಿವಾಸಿಗಳು

Update: 2017-11-15 21:18 IST

ಪುತ್ತೂರು, ನ. 15: ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಮೂವತ್ತೈದು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಬೃಹತ್ ನೀರಿನ ಟ್ಯಾಂಕೊಂದು ಶಿಥಿಲಗೊಂಡು ಕುಸಿಯುವ ಸ್ಥಿತಿಗೆ ತಲುಪಿದೆ. ಇದರಿಂದಾಗಿ ಟ್ಯಾಂಕ್ ಪಕ್ಕದ ನಿವಾಸಿಗಳಲ್ಲಿ ಭೀತಿ ವಾತಾವರಣ ಸೃಷ್ಠಿಯಾಗಿದೆ.

ಪಿಲ್ಲರ್‌ಗಳ ಆಧಾರದಲ್ಲಿ 30 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ತೀರಾ ಶಿಥಿಲಾವಸ್ಥೆಯಲ್ಲಿದೆ. ಆಧಾರ ಸ್ಥಂಭಗಳ (ಫಿಲ್ಲರ್) ಸಿಮಿಂಟ್ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಟ್ಯಾಂಕಿಯ ತಳಭಾಗದಲ್ಲೂ ಬಿರುಕು ಬಿಟ್ಟಿದೆ. ಆದರೂ ಜಿಲ್ಲಾ ಪಂ. ಇಂಜಿನಿಯರಿಂಗ್ ಇಲಾಖೆ ಮೂರನೇ ಪಾರ್ಟಿಯಿಂದ ಸಮೀಕ್ಷೆ ನಡೆಸಿ ಟ್ಯಾಂಕ್ ಇನ್ನೂ ಗುಣಮಟ್ಟವನ್ನು ಹೊಂದಿದೆ ಎಂದು ಪ್ರಮಾಣಪತ್ರ ನೀಡಿದೆ ಎಂದು ತಿಳಿದುಬಂದಿದ್ದು, ಇದು ಜನತೆಯಲ್ಲಿ ಆತಂಕ ಸೃಷ್ಠಿಸಿದೆ.

ಮಾಣಿ ಮೈಸೂರು ಹೆದ್ದಾರಿಗೆ ಆರ್ಯಾಪು ಗ್ರಾಮ ಪಂ. ಕಚೇರಿ ಪಕ್ಕದಲ್ಲಿ ಸಂಪರ್ಕ ಕಲ್ಪಿಸುವ ಉದಯಗಿರಿ ರಸ್ತೆಯ ಬದಿಯಲ್ಲಿಯೇ ಈ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕಿ ಇದೆ. ಟ್ಯಾಂಕಿಯ ಕೆಳಭಾಗದಲ್ಲಿ ಮೂರು ಮನೆಗಳಿವೆ. ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಉದ್ದೇಶದಿಂದ ನಿರ್ಮಾಣಗೊಂಡಿರುವ 50 ಸಾವಿರ ಲೀ. ಸಾಮರ್ಥ್ಯದ ಈ ಟ್ಯಾಂಕ್ ಯಾವುದೇ ಕ್ಷಣದಲ್ಲೂ ಕುಸಿಯುವ ಭೀತಿಯಲ್ಲಿದ್ದರೂ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಆರೋಪ.

 ಅತ್ಯಂತ ಹಳೆಯದಾಗಿರುವ ಟ್ಯಾಂಕ್‌ನ ಆಧಾರ ಸ್ಥಂಭದಲ್ಲಿ ಅಲ್ಲಲ್ಲಿ ಬಿರುಕು ಉಂಟಾಗಿದೆ. ಆಧಾರ ಸ್ತಂಭದ ಸಿಮೆಂಟ್ ಕಿತ್ತು ಹೋಗಿ ಒಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದೆ. ಟ್ಯಾಂಕ್ ತಳಭಾಗದಲ್ಲೂ ಬಿರುಕು ಉಂಟಾಗಿದೆ. ಪಕ್ಕದ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವ ವೇಳೆ ಟ್ಯಾಂಕಿ ನಡುಗುತ್ತಿದೆ. ಮಾತ್ರವಲ್ಲದೆ ಸಿಮೆಂಟ್ ತುಂಡುಗಳು ಮುರಿದು ಬೀಳುತ್ತಿವೆ. ಟ್ಯಾಂಕಿ ಕುಸಿದು ಬಿದ್ದರೆ ಕೆಳಗಿನ ಭಾಗದಲ್ಲಿರುವ ಮನೆಗಳ ಮೇಲೆಯೇ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನಾವು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ

ಈ ಅಪಾಯಕಾರಿ ನೀರಿನ ಟಾಂಕಿಯನ್ನು ನೆಲಸಮಗೊಳಿಸಿ ಬೇರೆ ನಿರ್ಮಿಸುವಂತೆ 4 ವರ್ಷಗಳ ಹಿಂದೆಯೇ ಗ್ರಾಮ ಪಂ.ಗೆ ಮನವಿ ಸಲ್ಲಿಸಿದ್ದೆವು. ಆದರೂ ಸಂಬಂಧಪಟ್ಟವರು ಸ್ಪಂದನೆ ನೀಡಿದ ಕಾರಣ 8 ತಿಂಗಳ ಹಿಂದೆ ಸುಮಾರು 25 ಮಂದಿಯ ಸಹಿಯೊಂದಿಗೆ ಮತ್ತೆ ಮನವಿ ನೀಡಿದ್ದೆವು. ಈ ಮನವಿಗೆ ಸ್ಪಂದಿಸಿದ ಗ್ರಾಮ ಪಂ. ಆಡಳಿತ ಟ್ಯಾಂಕಿಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿ ಕೊಳವೆ ಬಾವಿಯಿಂದ ನೇರವಾಗಿ ಸಂಪರ್ಕದ ಮನೆಗಳಿಗೆ ನೀರು ಸರಬರಾಜು ಮಾಡಿತ್ತು. ಮಾತ್ರವಲ್ಲದೆ ಶಿಥಿಲಾವಸ್ಥೆಯ ಈ ಟ್ಯಾಂಕಿಯನ್ನು ತೆರವುಗೊಳಿಸಿ ಹೊಸದಾಗಿ ಟ್ಯಾಂಕಿ ನಿರ್ಮಿಸಿಕೊಡುವ ಭರವಸೆ ನೀಡಿತ್ತು. ಆದರೆ ಕಳೆದ ಒಂದು ತಿಂಗಳಿಂದ ಮತ್ತೆ ಟ್ಯಾಂಕಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಅಪಾಯಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ಸ್ಥಳೀಯರಾದ ಡೆಂಬಾಳೆ ಸೌಪರ್ಣಿಕಾ ನಿವಾಸಿ ಗೋಪಾಲಕೃಷ್ಣ ಭಟ್, ಅರುಣ್ ಕುಮಾರ್, ಪ್ರಸನ್ನ ಕುಮಾರ್ ರೈ ಮತ್ತಿತರರು ಆರೋಪಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಈ ನೀರಿನ ಟ್ಯಾಂಕಿಯನ್ನು ತೆರವುಗೊಳಿಸಲು ನಿರ್ಣಯ ಕೈಗೊಂಡು ಜಿಲ್ಲಾ ಪಂಚಾಯತ್‌ಗೆ ಕಳುಹಿಸಿಕೊಟ್ಟ ಬಳಿಕ ಥರ್ಡ್ ಪಾರ್ಟಿ ಸಮೀಕ್ಷೆ ನಡೆಸಿದ ತಂಡ ಟ್ಯಾಂಕ್ ಸದೃಢವಾಗಿದ್ದು, ಇನ್ನೂ 10 ವರ್ಷ ಬಾಳಿಕೆ ಬರುತ್ತದೆ ಎಂದು ತಿಳಿಸಿದ್ದಾರೆ. ಈ ಕಾರಣದಿಂದ ನೀರು ತುಂಬಿಸಿ ಪರಿಸರದ ಸುಮಾರು 200ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಪಕ್ಕದಲ್ಲೇ 25 ಸಾವಿರ ಲೀ. ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಆದರೆ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ್ದು ಆಗಿರುವುದರಿಂದ ಅದನ್ನು ತೆಗೆಯಲು ನಮಗೆ ಅಧಿಕಾರವಿಲ್ಲ ಎನ್ನುವುದು ಆರ್ಯಾಪು ಗ್ರಾಮ ಪಂ. ಆಡಳಿತದ ಅಭಿಪ್ರಾಯ.

ಈ ಟ್ಯಾಂಕಿಯ ಕೆಳಭಾಗದಲ್ಲಿ ಮೂರು ಮನೆಗಳಿವೆ. ಈ ಭಾಗ ಶೇಡಿ ಮಣ್ಣಿನಿಂದ ಕೂಡಿದ್ದು, ಟ್ಯಾಂಕಿ ಕುಸಿದಲ್ಲಿ ಈ ಮನೆಗಳ ಮೇಲೆಯೇ ಬೀಳುವ ಸಂಭವ ಅಧಿಕವಾಗಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು, ಈ ಪರಿಸರದ ಮಂದಿ ಹೆಚ್ಚಾಗಿ ಸಂಚರಿಸುತ್ತಲೇ ಇರುವುದರಿಂದ ಅಪಾಯವಾಗಬಹುದು. ಅಪಾಯ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂಬದು ಗೊತ್ತಾಗುತ್ತಿಲ್ಲ.

-ಗೋಪಾಲಕೃಷ್ಣ ಭಟ್ ಸ್ಥಳೀಯರು

ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿರುವ ವಿಚಾರದ ಬಗ್ಗೆ ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡು ಜಿಲ್ಲಾ ಪಂಚಾಯತ್ ಗೆ ಕಳುಹಿಸಿದ ಬಳಿಕ ಟ್ಯಾಂಕ್‌ನ ಸಮೀಕ್ಷೆ ನಡೆಸಿದವರು ಟ್ಯಾಂಕ್‌ನ ಸುಭದ್ರತೆಯ ಕುರಿತು ಲಿಖಿತವಾಗಿ ಭರವಸೆ ನೀಡಿದ್ದಾರೆ. ಒಂದಷ್ಟು ಸಮಯ ಕೊಳವೆಯಿಂದ ನೇರವಾಗಿ ನೀರು ಸರಬರಾಜು ಮಾಡಿದ ಸಂದರ್ಭದಲ್ಲಿ ಅಲ್ಲಲ್ಲಿ ಸಮಸ್ಯೆ ಕಾಣಿಸಿಕೊಂಡು ಗ್ರಾಮ ಪಂಚಾಯತ್ ಗೆ ತುಂಬಾ ನಷ್ಟವಾಗಿದೆ. ಆದ್ದರಿಂದ ಪಕ್ಕದಲ್ಲೇ 25 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಹಳೆಯ ಟ್ಯಾಂಕಿ ತೆರವುಗೊಳಿಸಲು ಜಿಲ್ಲಾ ಪಂ. ಆಡಳಿತವೇ ಕ್ರಮ ಕೈಗೊಳ್ಳಬೇಕಿದೆ
- ವಸಂತ ಶ್ರೀದುರ್ಗಾ, ಉಪಾಧ್ಯಕ್ಷರು ಗ್ರಾಮ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News